ಗಿಡಗಳನ್ನು ತೆರವು ಮಾಡಿ
ಕೋಲಾರದ ಕುವೆಂಪು ನಗರದಲ್ಲಿನ ಉದ್ಯಾನವನದ ಹಿಂಭಾಗದ ರಸ್ತೆಯಲ್ಲಿ ಗಿಡ-ಗಂಟೆಗಳು ಬೆಳೆದಿರುವುದರಿಂದ ಜನತೆ ನೆಮ್ಮದಿಯಿಂದ ಓಡಾಡಲು ಆಗುತ್ತಿಲ್ಲ. ಜೊತೆಗೆ ಅಲ್ಲಿನ ಚರಂಡಿ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಮಳೆಗಾಲದಲ್ಲಿ ಸದರಿ ರಸ್ತೆಯಲ್ಲಿ ಓಡಾಡಲು ಕಷ್ಟ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಕಷ್ಟವನ್ನು ಅರಿತು ಸಂಬಂಧಪಟ್ಟ ಇಲಾಖೆಯವರು ರಸ್ತೆಯಲ್ಲಿ ಬೆಳೆದಿರುವ ಗಿಡ-ಗಂಟೆ ತೆರವುಗೊಳಿಸಬೇಕು. ಚರಂಡಿ ಹೂಳು ತೆಗೆಸಬೇಕು.
ಟಿ ಹರೀಶ್, ಕೀಲುಕೋಟೆ, ಕೋಲಾರ
ಚರಂಡಿ ಸ್ವಚ್ಛಗೊಳಿಸಿ
ಕೋಲಾರದ ನಗರದ ಅಂತರಗಂಗೆ ರಸ್ತೆಯ ಆರ್.ಎಲ್.ಜಾಲಪ್ಪ ಆಸ್ಪತ್ರೆಯ(ಓಪಿಡಿ)ಮುಂಭಾಗದ ದೊಡ್ಡ ಚರಂಡಿಯಲ್ಲಿ ಹೂಳು ತಂಬಿ ತುಂಬಿಕೊಂಡಿರುವುದಲ್ಲದೆ, ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ಎಸೆದಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಚರಂಡಿಯನ್ನು ಕಾಲ ಕಾಲಕ್ಕೆ ಸ್ವಚ್ಛ ಮಾಡಿಲ್ಲ. ಸಾರ್ವಜನಿಕರ ಮೂಗು ಮುಚ್ಚಿಕೊಂಡು ನಡೆಯುವಂತಾಗಿದೆ. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಚರಂಡಿಗೆ ಹೆಚ್ಚಿನ ಪ್ರಮಾಣದಲ್ಲಿ ಕಸ-ಕಡ್ಡಿ ಸೇರಿರುವುದರಿಂದ ಕೊಳವೆ ನೀರು ಹರಿಯಲಾಗುತ್ತಿಲ್ಲ. ಜನತೆಯ ಆರೋಗ್ಯ ದೃಷ್ಟಿಯಿಂದ ನಗರಸಭೆಯ ಅಧಿಕಾರಿಗಳು ಕೂಡಲೇ ಚರಂಡಿಯನ್ನು ಸ್ವಚ್ಛಗೊಳಿಸಿ ಪರಿಸರ ಸಂರಕ್ಷಣೆ ಮಾಡಬೇಕು.
ಟಿ ಪೇಪರ್ ಮಂಜು, ಕೋಲಾರ
ಅಪಾಯಕಾರಿ ವಿದ್ಯುತ್ ಕಂಬ
ಕೋಲಾರ ನಗರದ ಕುವೆಂಪು ಪಾರ್ಕಿನ ಬಳಿಯ ವಿದ್ಯುತ್ ಕಂಬದಲ್ಲಿ ಅಪಾಯಕಾರಿ ಬಿರುಕುಗಳು ಕಂಡು ಬಂದಿದ್ದು, ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ಅನೇಕ ಸಾರಿ ತಂದರೂ ವಿದ್ಯುತ್ಕ್ಂಬವನ್ನು ಬದಲಾವಣೆ ಮಾಡಿಲ್ಲ, ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಈ ರೀತಿಯ ಅನೇಕ ವಿದ್ಯುತ್ ಕಂಬಗಳನ್ನು ನೆಲಕ್ಕೆ ಉರುಳಿ, ವಿದ್ಯುತ್ ಪೂರೈಕೆಗೆ ಸಮಸ್ಯೆ ಆಗಿತ್ತು. ಕುವೆಂಪು ಪಾರ್ಕಿನ ಬಳಿಯ ವಿದ್ಯುತ್ ಕಂಬದ ಮೇಲ್ಭಾಗದಲ್ಲಿ ಕಾಣ ಬಂದಿರುವ ಬಿರುಕುಗಳು ಸಾವು-ನೋವುಗಳಿಗೆ ಕಾರಣವಾಗುವ ಮುಂಚೆಯೇ ಬೆಸ್ಕಾಂ ಅಧಿಕಾರಿಗಳು ಶಿಥಿಲಗೊಂಡಿರುವ ವಿದ್ಯುತ್ ಕಂಬವನ್ನು ತೆರವು ಮಾಡಿ ಹೊಸ ಕಂಬವನ್ನು ಅಳವಡಿಸದಿದ್ದರೆ ಮುಂದಾಗುವ ತೊಂದರೆಗೆ ಇಲಾಖೆಯ ಅಧಿಕಾರಿಗಳೇ ಹೊಣೆ ಆಗಬೇಕಾಗುತ್ತದೆ.
ಟಿ ಆಟೋ ಶ್ರೀಧರ್, ಕೋಲಾರ.
ಚರಂಡಿ ಸ್ವಚ್ಛಗೊಳಿಸಲು ಆಗ್ರಹ
ಬಾಗೇಪಲ್ಲಿ ಪಟ್ಟಣದ ಎಸ್.ಬಿ.ಎಂ ರಸ್ತೆಯ ಚಿತ್ರಾವತಿ ಟೆಂಪೋ ಚಾಲಕರ ಹಾಗೂ ಮಾಲೀಕರ ಸಂಘದ ಕಚೇರಿಯ ಮುಂಭಾಗದಲ್ಲಿ ಕಳೆದ ಅನೇಕ ದಿನಗಳಿಂದ ಚರಂಡಿ ಸ್ವಚ್ಛಗೊಳಿಸದೇ ನಿರ್ಲಕ್ಷ್ಯವಹಿಸಲಾಗಿದೆ. ಈ ಚರಂಡಿಯಲ್ಲಿ ಘನತ್ಯಾಜ್ಯ ಹಾಗೂ ಹೂಳು ತುಂಬಿಕೊಂಡಿರುವುದರಿಂದ ಚರಂಡಿಯಲ್ಲಿ ಸರಾಗವಾಗಿ ಹರಿಯಬೇಕಾಗಿದ್ದ ಕೊಳಚೆಯ ನೀರು ನಿಂತಲ್ಲೇ ನಿಂತು ದುರ್ನಾತ ಬೀರುತ್ತಿರುವುದರಿಂದ ಸಾರ್ವಜನಿಕರು ಸದಾ ಮೂಗು ಮುಚ್ಚಿಕೊಂಡು ಓಡಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಸಂಬಂಧಪಟ್ಟ ಪುರಸಭೆಯ ಅಧಿಕಾರಿಗಳು ಇತ್ತ ಗಮನಹರಿಸಿ ಚರಂಡಿ ಸ್ವಚ್ಛಗೊಳಿಸಬೇಕು.
ಟಿ ಚಂದ್ರಶೇಖರರೆಡ್ಡಿ, ಬಾಗೇಪಲ್ಲಿ.
ಸೊಳ್ಳೆಗಳ ಕಾಟ ತಪ್ಪಿಸಿ
ನಗರದ ವಾಪಸಂದ್ರ, ಚಾಮರಾಜಪೇಟೆ ಸೇರಿದಂತೆ ಮುಂತಾದ ಬಡಾವಣೆಗಳಿಗೆ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಲಿದೆ. ಹಲವರು ಮಲೇರಿಯಾ, ಡೆಂಗ್ಯುಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪರದಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಸೊಳ್ಳೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಟಿ ರಾಮಯ್ಯ, ಚಿಕ್ಕಬಳ್ಳಾಪುರ