ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲಾಧಿಕಾರಿ ವರ್ಗಕ್ಕೆ ಕೆಲವರ ಯತ್ನ

Rashmi Kasaragodu
Updated On : 9 Jun 2014, 1:53 am

ಲಾಬಿಗಳಿಗೆ ಮಣಿಯದಂತೆ ಆಗ್ರಹ
ಜಿಲ್ಲಾಡಳಿತಕ್ಕೆ ಚಾಟಿ ಬೀಸಿದ್ದ ಡಿ.ಕೆ.ರವಿ


ಕೋಲಾರ: ಜಿಡ್ಡುಗಟ್ಟಿದ್ದ ಜಿಲ್ಲಾಡಳಿತಕ್ಕೆ ಚೈತನ್ಯ ನೀಡಿದ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಎತ್ತಂಗಡಿ ಮಾಡಿಸಲು ಷಡ್ಯಂತ್ರ ಮಾಡುತ್ತಿದ್ದಾರೆಂಬ ವದಂತಿಗಳ ಹಿನ್ನಲೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸಭೆ ಸೇರಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಂದಾಯ ಅದಾಲತ್ ಮೂಲಕ ರೈತರ ಭೂ ಸಮಸ್ಯೆಗಳನ್ನು ನಿವಾರಣೆ ಮಾಡಿ ಸ್ವತಃ ಕಂದಾಯ ಸಚಿವರಿಂದಲೇ ಮೆಚ್ಚುಗೆ ಪಡೆದಿದ್ದಾರೆ ಜಿಲ್ಲಾಧಿಕಾರಿಗಳು. ಅತಿ ಶೀಘ್ರವೇ ಪೋಡಿ ಅದಾಲತ್ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಡಿ.ಕೆ.ರವಿ ಅವರು ಅಧಿಕಾರ ವಹಿಸಿಕೊಂಡ ಮೇಲೆ ಮಾಧ್ಯಮದವರು, ಪ್ರಜ್ಞಾವಂತ ನಾಗರಿಕರು, ಜನಪರವಿರುವ ಕೆಲವು ಸಂಘಟನೆಗಳ ಮುಖಂಡರು ಕೋಲಾರ ಜಿಲ್ಲೆಯಲ್ಲಿನ ಪ್ರಮುಖ ಸಮಸ್ಯೆಗಳನ್ನು ಗಮನಕ್ಕೆ ತಂದು ಕ್ರಮಕ್ಕೆ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ರಾಜ ಕಾಲುವೆಗಳ ಒತ್ತುವರಿ ತೆರವು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದ್ದಾರೆ. ರಾಜ ಕಾಲುವೆಗಳ ಒತ್ತುವರಿ ಪತ್ತೆಗಾಗಿ ಅಗತ್ಯ ಸರ್ವೇಯರ್ಗಳ ಕೊರತೆ ಇತ್ತು. ಹೀಗಿದ್ದಾಗ್ಯೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕಳೆದ ಆರು ತಿಂಗಳಿಂದಿಚೆಗೆ ಹತ್ತಾರು ಪ್ರಮುಖ ರಾಜ ಕಾಲುವೆಗಳ ಒತ್ತುವರಿಯನ್ನು ತೆರವು ಮಾಡಿಸಿದ್ದಾರೆ.
ಛಲ ಬಿಡದ ತ್ರಿವಿಕ್ರಮ: ಛಲಬಿಡದ ತ್ರಿವಿಕ್ರಮನಂತೆ ಕಾಲುವೆಗಳ ಅಭಿವೃದ್ಧಿಯಲ್ಲಿ ನಿರಂತರವಾಗಿ ತಮ್ಮನ್ನು ತೋಡಿಸಿಕೊಂಡಿರುವುದರಿಂದ ಪಟ್ಟಭದ್ರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನೀರಿನ ಸಮಸ್ಯೆ ನಿವಾರಣೆ ಮಾಡಬೇಕೆಂಬ ಉದ್ದೇಶದಿಂದ ಕೆರೆಗಳಲ್ಲಿ ನಡೆಯುತ್ತಿರುವ ಮರಳು ಶೋಧನೆ ಮತ್ತು ಸಾಗಾಣೆ ತಡೆಗೆ ಡಿಸಿಯವರು ಖುದ್ದಾಗಿ ದಾಳಿ ಮಾಡುತ್ತಿರುವುದು ಕೆಲವರಿಗೆ ಸಹಿಸಲಾಗುತ್ತಿಲ್ಲ. ಈ ಡಿಸಿ ಇಲ್ಲೇ ಮುಂದುವರೆದರೆ ಉಳಿಗಾಲವಿಲ್ಲವೆಂದು ಆತಂಕಗೊಂಡು ಜಿಲ್ಲೆಯಿಂದ ಎತ್ತಗಂಡಿ ಮಾಡಿಸಲು ಲಾಬಿ ಮಾಡುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯನ್ನು ಕಾಡುತ್ತಿರುವ ಭ್ರಷ್ಟಾಚಾರ ನಿಯಂತ್ರಣಕ್ಕೆ ಕೂಡಾ ಡಿಸಿ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ವರ್ಗ ಮಾಡಿಸಲು ಯತ್ನ ನಡೆಯುತ್ತಿದೆ. ಈ ವಿಷಯ ಗೊತ್ತಾಗಿ ರೈತ ಸಂಘ ಹಾಗೂ ಇನ್ನಿತರ ಸಂಘಟನೆಗಳ ಮುಖಂಡರು ಪ್ರತ್ಯೇಕ ಸಭೆ ಮಾಡಿ ಡಿಸಿಯನ್ನು ಎತ್ತಂಗಡಿ ಮಾಡಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement