ಟ್ರಾಫಿಕ್ಜಾಮ್: ನಗರಸಭೆ ಅಧ್ಯಕ್ಷರಿಂದಲೇ ಪ್ರತಿಭಟನೆ
ಕೆಜಿಎಫ್: ನಗರದ ವಾಹನ ಸಂಚಾರ ನಿಯಂತ್ರಣ ಮಾಡುವಲ್ಲಿ ರಾಬರ್ಟ್ಸನ್ಪೇಟೆ ಠಾಣಾ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿ ನಗರಸಭೆ ಅಧ್ಯಕ್ಷ ಎಂ.ಭಕ್ತವತ್ಸಲಂ ಸೂರಜ್ಮುಲ್ ವೃತ್ತದಲ್ಲಿ ದಿಢೀರನೆ ಅವರು ತಮ್ಮ ಕಾರನ್ನು ರಸ್ತೆಗೆ ಅಡ್ಡ ಹಾಕಿ ಪ್ರತಿಭಟಿಸಿದರು.
ಭಕ್ತವತ್ಸಲಂ ಅವರು ನಗರಸಭೆ ಕಚೇರಿಯಿಂದ ವಾಹನದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಟ್ರಾಫಿಕ್ಜಾಮ್ ಆದ ಕಾರಣ ಬಹಳ ಹೊತ್ತು ನಿಲ್ಲಬೇಕಾಯಿತು. ಹಸಿರು ದೀಪ ಬೆಳಗಿದರೂ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಇದಕ್ಕೆ ಪ್ರಮುಖ ಕಾರಣ ಕೆಎಸ್ಆರ್ಟಿಸಿ ಬಸ್ ಮತ್ತು ಖಾಸಗಿ ಬಸ್ಗಳು ಟ್ರಾಫಿಕ್ ಸಿಗ್ನಲ್ ಪಕ್ಕದಲ್ಲೇ ಬಸ್ ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವುದು. ದಿನನಿತ್ಯ ಇಂತಹ ಟ್ರಾಫಿಕ್ ಜಾಮ್ ಆಗುತ್ತಿರುವುದಾಗಿ ಸಾರ್ವಜನಿಕರಿಂದ ಹಲವಾರು ದೂರುಗಳು ಬರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಬಸ್ಗಳಿಂದ ಪೊಲೀಸರು ಮಾಮೂಲು ಪಡೆಯುತ್ತಿದ್ದು, ಪೊಲೀಸ್ ಠಾಣಾ ಮುಂಭಾಗವೇ ಟ್ರಾಫಿಕ್ಜಾಮ್ ಆಗುತ್ತಿದ್ದರೂ ಪೊಲೀಸರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಟ್ರಾಫಿಕ್ ಪೊಲೀಸರಿಗೆ ಛೀಮಾರಿಯನ್ನೂ ಹಾಕಿದರು.