ಪದವೀಧರ ಚುನಾವಣೆ ಜೋರು
ಎನ್.ವೆಂಕಟೇಶ್
ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಮುಗಿದ ನಂತರ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಕಾವು ಜೋರಾಗಿದ್ದು, ಜಿಲ್ಲೆಯಲ್ಲಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ.
ಚಿತ್ರದುರ್ಗು, ದಾವಣೆಗೆರೆ(ಚನ್ನಗಿರಿ, ಹೊನ್ನಾಳಿ ಹಾಗೂ ಹರಪನಹಳ್ಳಿ ತಾಲೂಕುಗಳನ್ನು ಹೊರತುಪಡಿಸಿ), ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಆಗ್ನೇಯ ಪದವೀಧರ ಕ್ಷೇತ್ರದ ನೂತನ ಸದಸ್ಯರ ಆಯ್ಕೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಕೆ, ಪರಿಶೀಲನೆ, ವಾಪಸ್ಸಾತಿ ಪ್ರಕ್ರಿಯೆ ಮುಗಿದಿದೆ. ಅಂತಿಮವಾಗಿ ಯಾರ್ಯಾರು ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಇನ್ನೇನಿದ್ದರೂ ಜೂ.20 ರಂದು ಮತದಾನ ನಡೆಯಲಿದೆ. ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎ.ಎಚ್.ಶಿವಯೋಗಿಸ್ವಾವು ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ ಮರು ಆಯ್ಕೆ ಬಯಸಿದ್ದಾರೆ. ಪಕ್ಷದಿಂದ ಈ ಬಾರಿಯೂ ಸ್ಪರ್ಧಿಸುವುದು ತಾವೇ ಎನ್ನುವುದನ್ನು ಖಾತ್ರಿಪಡಿಸಿಕೊಂಡ ತಕ್ಷಣ ಪ್ರಚಾರವನ್ನು ಕೈಗೊಂಡಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಪದವೀಧರರ ತಾವು ಕೈಗೊಂಡ ಅಭಿವೃದ್ಧಿಯನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಜೆಡಿಎಸ್ನಿಂದ ಆರ್.ಚೌಡರೆಡ್ಡಿ ಸ್ಪರ್ಧಿಸಿದ್ದು, ಕ್ಷೇತ್ರದಲ್ಲಿ ಪಕ್ಷದ ಪರವಾಗಿರುವ ಒಲವು ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೆಸರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಮತ್ತೊಂದೆಡೆ ತಮ್ಮ ಪಕ್ಷ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವುದನ್ನು ಲಾಭವನ್ನಾಗಿ ಪರಿವರ್ತಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿ.ಎಚ್.ಮುರಿಗೆಂಗಧರಪ್ಪ ಅವರ ಪ್ರಚಾಕ್ಕೇನೂ ಕೊರತೆ ಇಲ್ಲ. ಇವರ ಜೊತೆಗೆ ಕರುನಾಡ ಪಾರ್ಟಿ, ಲೋಕಸತ್ತಾ, ಸರ್ವಜನತಾ ಪಾರ್ಟಿ, ಜೆಡಿಯು, ಸಿಪಿಐ ಮತ್ತು 8 ಮಂದಿ ಪಕ್ಷೇತರ ಅಭ್ಯರ್ಥಿಗಳು ಮತಬೇಟೆಯಲ್ಲಿ ನಿರತರಾಗಿದ್ದಾರೆ. ಅಭ್ಯರ್ಥಿಗಳು ತಂಡಗಳನ್ನು ಮಾಡಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.
ತಿಮ್ಮರಾಯಪ್ಪ ಆಯ್ಕೆ
ಬಂಗಾರಪೇಟೆ: ಪಟ್ಟಣದ ಶ್ರೀಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಇಂದು ವಹ್ನಿ ಕುಲದ ಕುಲಸ್ಥರು ಹಾಗೂ ಹಿರಿಯರು ಸಭೆ ಸೇರಿ ಸಮಾಜದ ಗೌಡರನ್ನಾಗಿ ಗೋವಿಂದರಾಜು ಹಾಗೂ ಯಜಮಾನರನ್ನಾಗಿ ತಿಮ್ಮರಾಯಪ್ಪರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಳೆದ ಆರು ವರ್ಷಗಳಿಂದ ವಹ್ನಿ ಕುಲಸ್ಥರಿಗೆ ಗೌಡರು ಮತ್ತು ಯಜಮಾನರು ಇಲ್ಲದೆ ಇದ್ದು ಭಾನುವಾರ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಅವಿರೋಧವಾಗಿ ದೇವಾಯದ ಅಭಿವೃದ್ದಿ ಹಿತದೃಷ್ಟಿಯಿಂದ ಗೌಡರನ್ನಾಗಿ ಸೇಲಂ ಗುಡಿಸಿನ ಗೋವಿಂದರಾಜು ಮತ್ತು ಯಜಮಾನರಾಗಿ ತಿಮ್ಮರಾಯಪ್ಪರವರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.