ಪೊಲೀಸರ ಕ್ರಮ ವಿರೋಧಿಸಿ ಪ್ರತಿಭಟನೆ
ಕುಣಿಗಲ್: ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಕೊಲೆ ಎಂದು ಆರೋಪಿಸಿರುವ ಕುಟುಂಬಸ್ಥರು ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕ ಆಸ್ಪತ್ರೆ ಮುಂದೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಕಾಡುಮತ್ತೀಕೆರೆಯ ಶ್ರೀನಿವಾಸಮೂರ್ತಿ(23) ಸ್ನೇಹಿತನೊಂದಿಗೆ ಬೈಕ್ನಲ್ಲಿ ಬರುವಾಗ ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ರಸ್ತೆಯ ಸಿ.ಟಿ. ಪಾಳ್ಯದ ಬಳಿ ಅಪಘಾತವಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಹಿಂಬದಿ ಇದ್ದ ಹರೀಶ ಎಂಬಾತನಿಗೆ ಗಾಯಗಳಾಗಿದ್ದು, ಘಟನೆಗೆ ಸಂಬಂಧಿಸಿ ಶನಿವಾರ ರಾತ್ರಿ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರ ಬೆಳಗ್ಗೆ ಗ್ರಾಮಸ್ಥರು ಮತ್ತು ಮೃತನ ಸಂಬಂಧಿಕರು ಶವ ಇದ್ದ ಸಾರ್ವಜನಿಕ ಆಸ್ಪತ್ರೆ ಮುಂದೆ ಜಮಾಯಿಸಿ ಕೊಲೆಯಾಗಿದ್ದರೂ ಪೊಲೀಸರು ಅಪಘಾತದ ಪ್ರಕರಣ ದಾಖಲಿಸಿ ದಿಕ್ಕು ತಪ್ಪಿಸುತ್ತಿದ್ದಾರೆಂದು ಆರೋಪಿಸಿ ಧರಣಿಗೆ ಮುಂದಾದರು.
ಗ್ರಾಮಸ್ಥರ ಬೆಂಬಲಕ್ಕೆ ಆಗಮಿಸಿದ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್,ಪೊಲೀಸರ ಕ್ರಮ ಖಂಡಿಸಿ ಧರಣಿಗಿಳಿದರು.
ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಗಣೇಶ್, ಮೃತನ ತಂದೆ ವೆಂಕಟಾಚಲಯ್ಯರೊಂದಿಗೆ ಚರ್ಚಿಸಿ, ಪ್ರಕರಣದ ಪಾರದರ್ಶಕ ತನಿಖೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಿದ್ದು, ವೈದ್ಯರ ವರದಿ ಆದರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೆ ದಾಖಲಿಸಿರುವ ಪ್ರಕರಣದ ಜೊತೆ, ಕುಂಟುಬದವರು ಮತ್ತೊಂದು ದೂರು ನೀಡಿದರೂ ಅದನ್ನು ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.