ಸಿಹಿ ಉತ್ಸವ ಇನ್ನೊಂದು ವಾರ ವಿಸ್ತರಣೆ
ಕೋಲಾರ: ವಿಶ್ವ ಹಾಲು ದಿನಾಚರಣೆ ಅಂಗವಾಗಿ ಜೂ.2ರಿಂದ ಆರಂಭಗೊಂಡಿರುವ ನಂದಿನಿ ಸಿಹಿ ಉತ್ಸವ ಸಪ್ತಾಹವನ್ನು ಗ್ರಾಹಕರ ಬೇಡಿಕೆಯಿಂದಾಗಿ ಮತ್ತೊಂದು ವಾರ ವಿಸ್ತರಣೆ ಮಾಡಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಸಿಹಿ ಉತ್ಸವ ಜೂ.2ರಂದು ಉದ್ಘಾಟನೆಗೊಂಡು ಜೂ.7ರವರೆಗೆ ನಡೆದ ಸಿಹಿ ಪ್ರದರ್ಶನ ಮತ್ತು ಮಾರಾಟದಿಂದಾಗಿ 5 ಲಕ್ಷ ವಹಿವಾಟು ನಡೆದಿದೆ ಎಂದು ಕೋಚಿಮುಲ್ ಪ್ರಧಾನ ವ್ಯವಸ್ಥಾಪಕ(ಮಾರುಕಟ್ಟೆ) ಎಂ.ರಘುನಂದನ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ನಂದಿನಿ ಉತ್ಪನ್ನಗಳು ಇಡೀ ಜಿಲ್ಲೆಯಲ್ಲಿ ಮಾಸಿಕ 5 ಲಕ್ಷ ವಹಿವಾಟು ಕಾಣುವುದು ಕಷ್ಟವಾಗಿತ್ತು. ಸಿಹಿ ಉತ್ಸವದಿಂದಾಗಿ ಒಂದು ವಾರದಲ್ಲಿ ಉತ್ತಮ ವಹಿವಾಟು ನಡೆದಿದ್ದು, ಗ್ರಾಮೀಣ ಪ್ರದೇಶದಲ್ಲಿ ಸಿಹಿ ಉತ್ಸವಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಸಪ್ತಾಹವನ್ನು ಮತ್ತೆ ಒಂದು ವಾರ ವಿಸ್ತರಣೆ ಮಾಡಲಾಗಿದೆ ಎಂದರು.