ಕಳಪೆ ಅಕ್ಕಿ: ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ
ಕುಣಿಗಲ್: ಅನ್ನ ಭಾಗ್ಯ ಯೋಜನೆಯಡಿ ಕಳಪೆ ಗುಣಮಟ್ಟದ ಅಕ್ಕಿ ಪೂರೈಕೆ ಮಾಡಲಾಗುತ್ತಿದೆ. ಪ್ರಶ್ನಿಸಲು ಹೋದ ಗ್ರಾಮಸ್ಥರಿಗೆ ನ್ಯಾಯಬೆಲೆ ಅಂಗಡಿ ಮಾಲೀಕರು ಹಲ್ಲೆ ಮಾಡುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಕಳಪೆ ಅಕ್ಕಿಯನ್ನು ತಹಸೀಲ್ದಾರ್ ಕೊಠಡಿ ಎದುರು ಸುರಿದು ಪ್ರತಿಭಟಿಸಿದರು.
ಸೋಮವಾರ ಬೆಳಗ್ಗೆ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಶೆಟ್ಟಿಬೀಡು, ಹೊಸೂರು, ಯಳವಾರಹಟ್ಟಿ, ಜಿವಾಜಿ ಹಟ್ಟಿ ಗ್ರಾಮಗಳ ಜನರು, ತಾಲೂಕಿನ ಎಡೆಯೂರು ಹೋಬಳಿಯ ಹೆಡ್ಡಿಗೆರೆ ಗ್ರಾಮದ ನ್ಯಾಯಾಬೆಲೆ ಅಂಗಡಿಯಲ್ಲಿ ಕಳಪೆ ಗುಣಮಟ್ಟದ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಅಲ್ಲದೆ, ಒಂದು ಕೆಜಿಗೆ ಒಂದೂವರೆ ರುಪಾಯಿ ವಸೂಲಿ ಮಾಡುತ್ತಿದ್ದಾರೆ. ಸರ್ಕಾರಿ ನಿಗದಿಪಡಿಸಿದ ಅಕ್ಕಿಯನ್ನೂ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕಾಗಮಿಸಿದ ಆಹಾರ ನಿರೀಕ್ಷ ಶ್ರೀನಿವಾಸ್ ಹಾಗೂ ಗ್ರಾಮಸ್ಥರ ಮಧ್ಯೆ ವಾಗ್ವಾದ ಕೂಡಾ ನಡೆಯಿತು. ಮಧ್ಯ ಪ್ರವೇಶಿಸಿದ ತಹಸೀಲ್ದಾರ್ ಶಂಭುಲಿಂಗಯ್ಯ ಅವರು, ತೊಂದರೆಯಿರುವ ಗ್ರಾಮಕ್ಕೆ ಆಹಾರ ಇಲಾಖೆ ಸಿಬ್ಬಂದಿ ಭೇಟಿ ನೀಡುವಂತೆ ಸೂಚಿಸಿದರು. ಅಲ್ಲದೆ, ವರದಿ ಬಂದ ಬಳಿಕ ಕ್ರಮಕೈಗೊಳ್ಳುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. ವಿಶ್ವನಾಥ್, ಶಿವರಾಮಯ್ಯ, ರಿಜ್ವಾನ್, ಗ್ರಾಪಂ ಸದಸ್ಯ ರಂಗಸ್ವಾಮಿ, ಗ್ರಾಮದ ಪ್ರಮುಖರಾದ ಶಿವರಾಮಯ್ಯ, ಮಲ್ಲಣ್ಣ, ದಲಿತ ಮುಖಂಡ ಗೋಪಾಲ್ ನೂರಾರು ಜನರು ಸೇರಿದ್ದರು.