ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಡಿಸಿ ವರ್ಗ ಮಾಡಿದರೆ ಉಗ್ರ ಹೋರಾಟ

Rashmi Kasaragodu
Updated On : 10 Jun 2014, 1:23 am

ಬಂಗಾರಪೇಟೆ: ಕಂದಾಯ ಅದಾಲತ್‌ನಂತಹ ರೈತರ ಪರವಾದ ಯೋಜನೆಗಳನ್ನು ರೂಪಿಸಿ ಜನತೆಗೆ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ಡಿ.ಕೆ. ರವಿರವರನ್ನು ವರ್ಗಾವಣೆ ಮಾಡಲು ಹುನ್ನಾರ ನಡೆಯುತ್ತಿದ್ದು ವರ್ಗಾವಣೆ ಮಾಡಿಸಿದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಎಚ್ಚರಿಸಿದರು.
ಈ ಕುರಿತು ತಹಶೀಲ್ದಾರ್‌ರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ವೇಳೆ ಮಾತನಾಡಿದ ಸಂಘದ ಮುಖಂಡರು ಜಿಲ್ಲಾಧಿಕಾರಿ ಡಿ.ಕೆ. ರವಿರವರು ಜಿಲ್ಲೆಗೆ ಬಂದಾಗಿನಿಂದ ಜಿಲ್ಲೆಯಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕಂದಾಯ ಅದಾಲತ್, ಕೆರೆಗಳ ಒತ್ತುವರಿ ತೆರವು, ರಾಜ ಕಾಲುವೆ ಒತ್ತುವರಿ ತೆರವು ಮತ್ತು ಪುನಃಶ್ಚೇತನ, ಕಲ್ಯಾಣಿಗಳ ಪುನಃಶ್ಚೇತನ ಹೀಗೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದಾರೆ.
ಇದರಿಂದ ಅನೇಕ ಬಡವರಿಗೆ ಅನುಕೂಲವಾಗಿದೆ. ಅನೇಕ ವರ್ಷಗಳಿಂದ ಖಾತೆ ಬದಲಾವಣೆ ಮತ್ತು ಇತರೆ ಕೆಲಸಗಳಿಗೆ ರೈತರು ತಹಶೀಲ್ದಾರ್ ಕಚೇರಿಗೆ ಅಲೆದಾಡುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ರಾಜ್ಯದ ಎಲ್ಲೂ ಇಲ್ಲದ ಕಂದಾಯ ಅದಾಲತ್ ಎಂಬ ವಿಶೇಷವಾದ ಯೋಜನೆಯನ್ನು ರೂಪಿಸಿ ಜಾರಿಗೆ ತಂದರು. ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಯಿತು. ವರ್ಷಾನುಗಟ್ಟಲೆ ಅಲೆಯುವುದನ್ನು ತಪ್ಪಿಸಿದ ಜಿಲ್ಲಾಧಿಕಾರಿಗಳ ಕ್ರಮಕ್ಕೆ ಅಭಿನಂದನೆಗಳ ಸಲ್ಲಿಸಿದ ರೈತರು ನೆಮ್ಮದಿಯಾಗಿದ್ದರು.
ಜಿಲ್ಲೆಯ ಜೀವನಾಡಿಯಾದ ಕೆರೆಗಳನ್ನು ಬಲಾಢ್ಯರು ಒತ್ತುವರಿ ಮಾಡಿದ್ದರು. ರಾಜ ಕಾಲುವೆಗಳನ್ನು ಒತ್ತುವರಿ ಮಾಡಿ ಮುಚ್ಚಲಾಗಿತ್ತು. ಮಳೆ ನೀರು ಸಂಗ್ರಹವಾಗದೆ ಅಂತರ್ಜಲ ಕುಸಿತ ಹೆಚ್ಚಾಗಿತ್ತು. ಜಿಲ್ಲೆಯ ಜನ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದಕ್ಕೆ ಪರಿಹಾರವಾಗಿ ಜಿಲ್ಲಾಧಿಕಾರಿಗಳು ಪ್ರಭಾವಿಗಳನ್ನೂ ಲೆಕ್ಕೆಸದೆ ಕೆರೆಗಳ ಒತ್ತುವರಿ ತೆರವುಗೊಳಿಸಿದರು. ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ ಪುನಃಶ್ಚೇತನಗೊಳಿಸಿದರು.ಕೆಲವು ರಾಜಕಾರಣಿಗಳ ತಾಳಕ್ಕೆ ಡಿಸಿ ಕುಣಿಯಲಿಲ್ಲ ಎಂದು ಅವರನ್ನು ವರ್ಗಾಯಿಸಲು ಹುನ್ನಾರ ನಡೆಸಿರುವುದನ್ನು ಖಂಡಿಸಿ ಯಾವುದೇ ಕಾರಣಕ್ಕೂ ವರ್ಗಾಯಿಸಬಾರದೆಂದು ಎಚ್ಚರಿಸಿದ್ದಾರೆ.
ಜಿಲ್ಲಾದ್ಯಕ್ಷ ಕೋಟಿಗಾನಹಳ್ಳಿ ಗಣೇಶಗೌಡ, ಜಿಲ್ಲಾ ಮುಖಂಡರಾದ ಕೆ.ಬಿ. ಮುನಿವೆಂಕಟಪ್ಪ, ಬ್ಯಾಲಹಳ್ಳಿ ಚೌಡೇಗೌಡ, ತಾಲೂಕು ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್, ಮುಖಂಡರಾದ ಲಕ್ಷ್ಮಯ್ಯಗೌಡ, ನಾಗೇಶ್, ಉದಯ್, ನಾಗರಾಜ್, ಸುರೇಶ್, ಜಗದೀಶ್ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement