ಡಿಸಿ ವರ್ಗಾವಣೆಗೆ ರೈತ ಸಂಘ ವಿರೋಧ
ಕೋಲಾರ: ಜಿಲ್ಲಾಧಿಕಾರಿ ಡಿ.ಕೆ. ರವಿ ಅವರನ್ನು ಕೋಲಾರ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವರ್ಗಾವಣೆ ಮಾಡಬಾರದು ಎಂದು ಮುಖ್ಯಮಂತ್ರಿಗಳನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯ ಹೆಡ್‌ಮುನ್ಷಿ ಕೃಷ್ಣೇಗೌಡರಿಗೆ ಮನವಿ ಸಲ್ಲಿಸಿ ಮುಖ್ಯಮಂತ್ರಿಗಳಿಗೆ ಕಳುಹಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಡಿ.ಕೆ. ರವಿರವರ ವರ್ಗಾವಣೆಗೆ ಕೆಲ ರಾಜಕಾರಣಿಗಳು ಯತ್ನಿಸುತ್ತಿದ್ದಾರೆ, ಇದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುತ್ತದೆ,ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿರುವ ಇವರು ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ರೈತರ ಅನುಕೂಲಕ್ಕಾಗಿ ಕಂದಾಯ ಅದಾಲತ್ ನಡೆಸುವ ಮೂಲಕ ಕಂದಾಯ ಇಲಾಖೆಗೆ ರೈತರು ಅಲೆಯುವುದನ್ನು ತಪ್ಪಿಸಿದ್ದಾರೆ. ಭ್ರಷ್ಟರಿಗೆ ಮತ್ತು ರಾಜಕೀಯ ಮುಖಂಡರಿಗೆ ಹಿಂಬಾಲಕರಾಗಿರುವ ಗುತ್ತಿಗೆದಾರರಿಗೆ ಕಡಿವಾಣ ಹಾಕಲು ಯತ್ನಿಸುತ್ತಿರುವುದರಿಂದ ಕೆಲವರು ಜಿಲ್ಲಾಧಿಕಾರಿಗಳ ಎತ್ತಂಗಡಿಗೆ ಪ್ರಯತ್ನಿಸುತ್ತಿದ್ದು ಇದಕ್ಕೆ ಮುಖ್ಯಮಂತ್ರಿಗಳು ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ.
ಡಿ.ಕೆ. ರವಿರವರನ್ನು ಕೋಲಾರ ಜಿಲ್ಲೆಯಲ್ಲಿ ಉಳಿಸಿಕೊಡಬೇಕು, ಒಂದು ವೇಳೆ ಒತ್ತಡಕ್ಕೆ ಮಣಿದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳ ಸಭೆಗಳಲ್ಲಿ ಕಪ್ಪುಪಟ್ಟಿ ಪ್ರದರ್ಶಿಸಲಾಗುವುದೆಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಕೆ.ಬಿ. ಮುನಿವೆಂಕಟಪ್ಪ, ಜಿಲ್ಲಾ ಉಪಾಧ್ಯಕ್ಷ ಸಿ.ವಿ. ಪ್ರಭಾಕರ್, ಕಾರ್ಯದರ್ಶಿ ಸೈಯದ್ ಮಜೀಬ್‌ಪಾಷ, ಪ್ರಧಾನ ಕಾರ್ಯದರ್ಶಿ ಬ್ಯಾಲಹಳ್ಳಿ ಚೌಡೇಗೌಡ, ಕೋಲಾರ ತಾಲೂಕು ಕಾರ್ಯಾಧ್ಯಕ್ಷ ಅಗ್ರಹಾರ ಸೋಮರಸನಹಳ್ಳಿ ನಾರಾಯಣಸ್ವಾಮಿ, ಖಜಾಂಚಿ ದೊಡ್ನಹಳ್ಳಿ ಕೃಷ್ಣಪ್ಪ, ಬಂಗಾರಪೇಟೆ ತಾಲೂಕು ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್, ಉದಯಕುಮಾರ್, ಹುಲಿಬೆಲೆ ಜಗದೀಶ್, ಉದಯಕುಮಾರ್ ಇದ್ದರು.