ಭ್ರಷ್ಟಾಚಾರ: ಗುತ್ತಿಗೆದಾರ ಸೆರೆಗೆ ಆಗ್ರಹ
ಕೋಲಾರ: ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿರುವ 2.35 ಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರನ್ನು ಬಂಧಿಸುವಂತೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಜಿಲ್ಲಾ ಆಡಳಿತವನ್ನು ಒತ್ತಾಯಿಸಿದೆ.
ಇತ್ತೀಚೆಗೆ ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದಾರೆ. ಆದರೆ, ಈ ಹಗರಣಕ್ಕೆ ಕಾರಣರಾಗಿರುವ ಗುತ್ತಿಗೆದಾರರನ್ನು ಏಕೆ ಬಂಧಿಸಿಲ್ಲವೆಂದು ಮುಖಂಡರಾದ ಹಾರೋಹಳ್ಳಿ ನಾರಾಯಣಸ್ವಾಮಿ ಹಾಗೂ ಮುನಿರಾಜು, ದಲಿತ ಸಂಯುಕ್ತ ರಂಗದ ಜಿಲ್ಲಾಧ್ಯಕ್ಷ ಎಂ.ಮಂಜುನಾಥ್ ಜಂಟಿ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಜಿಲ್ಲೆಯಲ್ಲಿ ಅಸ್ಪೃಶ್ಯ ದಲಿತ ಗುತ್ತಿಗೆದಾರರು ನೂರಾರು ಸಂಖ್ಯೆಯಲ್ಲಿ ಇದ್ದರೂ ಅವರನ್ನು ಮೂಲೆಗುಂಪು ಮಾಡಿ ಬೇರೆಯವರಿಗೆ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿರುವುದರಿಂದ ಇಲಾಖೆಯಲ್ಲಿ ಲೋಪಕ್ಕೆ ಕಾರಣವಾಗಿದೆ ಎಂದು ದೂರಿದ್ದಾರೆ.
ಶ್ರೀನಿವಾಸಪುರ ಜಿಲ್ಲಾ ಪಂಚಾಯತಿ ಸದಸ್ಯೆ ರತ್ನಮ್ಮ ಗಣೇಶ್ ಅವರ ಸಂಬಂಧಿ ಗುತ್ತಿಗೆದಾರ ಹಾಗೂ ಶ್ರೀನಿವಾಸಪುರ ಕಾಲೋನಿ (ದೊಡ್ಡಮಲದೊಡ್ಡಿ) ಗುತ್ತಿಗೆದಾರ ವೆಂಕಟೇಶ್ ಸಂಬಂಧಿಕರು ಮತ್ತು ಹಿಂದಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗುರುಮೂರ್ತಿ, ಗುಮಾಸ್ತ ನಾರಾಯಣಸ್ವಾಮಿ, ಮುಂತಾದ ಭ್ರಷ್ಟರು ಶಾಮಿಲು ಆಗಿದ್ದಾರೆಂದು ಆರೋಪಿಸಿದ್ದಾರೆ. ಅಧಿಕಾರಿ ಗುರುಮೂರ್ತಿ ಅವರನ್ನು ಕೂಡಲೇ ಬಂಧಿಸಿ ಅವರ ಬ್ಯಾಂಕ್ ಅಕೌಂಟ್‌ಗಳನ್ನು ಸೀಜ್ ಮಾಡಬೇಕು. ಆಗ ನಿಜವಾದ ಬಣ್ಣ ಬಯಲಾಗುತ್ತದೆ. ಮೂರು ದಿನದೊಳಗೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.