ವಜಾಗೊಂಡ ನೌಕರ ಮತ್ತೆ ಕೆಲಸಕ್ಕೆ ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಮಾಲೂರು: ಸದಸ್ಯರ ಗಮನಕ್ಕೆ ತಾರದೇ ವಜಾಗಿದ್ದ ಜಲಗಾರನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡ ಪಿಡಿಒ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ಸದಸ್ಯ ಗೋಪಾಲಕೃಷ್ಣ, ಜಲಗಾರ ತಿಮ್ಮರಾಯಪ್ಪ ಕರ್ತವ್ಯ ಲೋಪ ಎಸಗಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ವಜಾ ಮಾಡಲಾಗಿತ್ತು. ಬಳಿಕ ನರಸಿಂಹಪ್ಪನನ್ನು ಸೇರಿಸಿಕೊಳ್ಳಲಾಗಿತ್ತು. ಆದರೆ, ಇದೀಗ ಪಿಡಿಒ ಕೃಷ್ಣಪ್ಪ ಅವರು, ಅಧ್ಯಕ್ಷೆ ಯಶೋದಮ್ಮ ಹಾಗೂ ಉಪಾಧ್ಯಕ್ಷೆ ನಾಗಮ್ಮ ಕುಮ್ಮಕ್ಕಿನಿಂದ ತಿಮ್ಮರಾಯಪ್ಪ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿ. ಕೂಡಲೇ ನ್ಯಾಯ ಒದಗಿಸಿಕೊಡಬೇಕು ಎಂದು ತಾಪಂ ಇಒ ಸಂಜೀವಪ್ಪರನ್ನು ಒತ್ತಾಯಿಸಿದರು. ಇದೇ ವೇಳೆ, ಪಿಡಿಒ ಅವರಿಂದ ವರದಿ ತರಿಸಿಕೊಂಡು ಕ್ರಮಕೈಗೊಳ್ಳುವ ಭರವಸೆಯನ್ನು ಸಂಜೀವಪ್ಪ ನೀಡಿದರು. ಗ್ರಾಮದ ಮುನಿಯಪ್ಪ, ರಾಮಪ್ಪ, ನಂಜುಂಡಪ್ಪ, ತಿಮ್ಮರಾಯಪ್ಪ, ರಾಮಚಂದ್ರ, ಎಂ.ತಿಮ್ಮರಾಯಪ್ಪ,ಶ್ರೀನಿವಾಸಚಾರಿ, ಮಹೇಶ್, ಬಾಲಕೃಷ್ಣ, ಕೃಷ್ಣಪ್ಪ, ಅಮರೇಶ್, ಚಿಕ್ಕಮುನಿಯಪ್ಪ, ಬಾಲಪ್ಪ, ಗಂಗಪ್ಪ ಇದ್ದರು.