ಕಳಪೆ ಫಿಲ್ಟರ್ ಬಳಕೆ: ಶುದ್ದೀಕರಣ ಘಟಕ ಸ್ಥಗಿತ
ಎನ್.ರಾಮಮೂರ್ತಿ
ಗುಡಿಬಂಡೆ: ಮಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃಧ್ದಿ ಯೋಜನೆಯಡಿ ಪಟ್ಟಣದಲ್ಲಿ ಸ್ಥಾಪಿಸಿರುವ ಕುಡಿಯುವ ಕಿರು ನೀರು ಘಟಕಗಳು ಸಾರ್ವಜನಿಕರ ಬಳಕೆಗೆ ಬಾರದೆ ನಿಷ್ಪ್ರಯೋಜನವಾಗಿವೆ. 2009-10ನೇ ಸಾಲಿನಲ್ಲಿ ಪಟ್ಟಣದ ಜನತೆಗೆ ಕುಡಿಯುವ ಶುದ್ಧ ನೀರು ಒದಗಿಸುವ ಸದುದ್ದೇಶದಿಂದ ಸ್ಥಳೀಯ ಪಪಂ ಆಡಳಿತ ಸುಮಾರು 3.50 ಲಕ್ಷ ರು.ಗಳ ವೆಚ್ಚದಲ್ಲಿ ನೀರಿನ ಸಮಸ್ಯೆಯಿರುವ ಪಟ್ಟಣದ ಹಲವೆಡೆ ಒಟ್ಟು 5 ಘಟಕಗಳನ್ನು ಸ್ಥಾಪಿಸಿ ನೀರು ಸರಬರಾಜು ವ್ಯವಸ್ಥೆ ಮಾಡಿತ್ತು. ಆದರೆ ತಾಂತ್ರಿಕ ದೋಷವೋ, ಅಥವಾ ಬೇರೆ ಇನ್ನೇನು ಕಾರಣಕ್ಕೋ ಇವುಗಳಿಂದ ಶುದ್ಧ ನೀರು ಬರಲೇ ಇಲ್ಲ.
ಯೋಜನೆ ವಿಫಲ: ದಣಿದು ಬಂದ ವ್ಯಕ್ತಿಗಳು ಶುದ್ದ ಕುಡಿಯುವ ನೀರಿನ ಯಂತ್ರಗಳ ಕೊಳಾಯಿಗಳನ್ನು ತಿರುವಿದಾಗ ಬುಸ್ ಎಂಬ ಗಾಳಿಯನ್ನು ಬಿಟ್ಟರೆ ಒಂದು ಹನಿ ನೀರು ಸಹ ಬರುವುದಿಲ್ಲ. ಹೀಗಾಗಿ ಯೋಜನೆ ಹಳ್ಳಹಿಡಿದಂತಾಗಿ ಘಟಕಗಳ ಸ್ಥಾಪನೆಗೆ ವೆಚ್ಚ ಮಾಡಿದ ಹಣ ವ್ಯರ್ಥವಾಗಿದೆ. ಬಡ ಮತ್ತು ಕೂಲಿ ಕಾರ್ಮಿಕರನ್ನು ಒಳಗೊಂಡಿರುವ ಹಿಂದುಳಿದ ಈ ತಾಲೂಕು ಕೇಂದ್ರಕ್ಕೆ ಕಚೇರಿ ಕೆಲಸಗಳ ನಿಮಿತ್ತ ಹಲವಾರು ಕೆಲಸಗಳಿಗೆ ಬರುವ ಬಡ ನಾಗರಿಕರು ಹಣ ಪಾವತಿ ಮಾಡಿ ಶುದ್ಧಕುಡಿಯುವ ನೀರನ್ನು ಖರೀದಿಸುವ ಶಕ್ತಿ ಇಲ್ಲವೆಂದು ಸರ್ಕಾರ ಅರಿತು ಇಂತಹ ಶುದ್ದ ಕುಡಿಯುವ ನೀರಿನ ಯಂತ್ರಗಳನ್ನು ಸ್ಥಾಪಿಸಿದೆ. ಆದರೆ ಹಲವು ಕಾರಣಗಳಿಂದ ನೀರಿನ ಶುದ್ಧೀಕರಣ ಘಟಕಗಳಿಗೆ ಲಕ್ವಾ ಹೊಡೆದಂತಾಗಿದೆ.
ಫಿಲ್ಟರ್ ಕಳಪೆ: ಬಲ್ಲ ಮೂಲಗಳು ಹೇಳುವ ಪ್ರಕಾರ ನೀರು ಶುದ್ಧೀಕರಣಕ್ಕಾಗಿ ಘಟಕಗಳಲ್ಲಿ ಬಳಸಲಾಗಿರುವ ಫಿಲ್ಟರ್ಗಳ ಸಾಮರ್ಥ್ಯ ಕಡಿಮೆಯಿರುವ ಕಾರಣ ಸಮಸ್ಯೆ ಉಂಟಾಗಿದೆ. ಹಲವೆಡೆ ಫಿಲ್ಟರ್ಗಳು ಕಳಪೆ ಗಣಮಟ್ಟದಿಂದಾಗಿ ದುರಸ್ತಿಗೆ ಬಂದಿದ್ದು ಇನ್ನುಳಿದ ಘಟಕಗಳಿಗೆ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಕೇವಲ ಗುತ್ತಿಗೆದಾರರು ಮತ್ತು ್ತಮಧ್ಯವರ್ತಿಗಳ ಲಾಭಕ್ಕಾಗಿ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರ ತೆರಿಗೆ ಹಣವನ್ನು ವೃಥಾ ವ್ಯಯಿಸುವುದರ ಬದಲು ಜನೋಪಯೋಗಿ ಕಾರ್ಯಗಳಿಗೆ ಬಳಸಬಾರದೇಕೆ ಎಂಬುದು ಸಾರ್ವಜನಿಕರ ಪ್ರಶ್ನೆ.
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪ್ರಚಾರ
ಚಿಕ್ಕಬಳ್ಳಾಪುರ: ತಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿ ಆಗ್ನೇಯ ಪದವೀಧರ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಅವಕಾಶ ನೀಡಬೇಕೆಂದು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಆರ್. ಚೌಡರೆಡ್ಡಿ ಮನವಿ ಮಾಡಿದರು. ನಗರದ ಶ್ರೀರಾಮವರದ ಸಭಾ ಭವನದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಈ ಹಿಂದೆ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ತಮಗೆ ಅಲ್ಪಮತಗಳ ಅಂತರದ ಸೋಲಾಗಿದ್ದು, ಈ ಬಾರಿ ತಮ್ಮ ಮೇಲೆ ವಿಶ್ವಾಸವಿಟ್ಟು ಮತದಾರರು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್ .ಸಿ.ರೆಡ್ಡಪ್ಪ, ಕೆ.ಸಿ.ಶಂಕರೇಗೌಡ,ಶ್ರೀನಿವಾಸರೆಡ್ಡಿ, ಯಲುವಹಳ್ಳಿ ಸೊಣ್ಣೇಗೌಡ, ಪ್ರಾಂಶುಪಾಲ ಆನಂದ್, ಮುನಿರಾಜು, ಅರೂರು ಜಗದೀಶ್ , ತಾಂಡ್ರಮರದಹಳ್ಳಿ ರಾಜಣ್ಣ, ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಚಂದ್ರಶೇಖರ್, ನಟರಾಜ್ ಮುಂತಾದವರು ಉಪಸ್ಥಿತರಿದ್ದರು.