ಸಾಲ ಮರುಪಾವತಿಸಿದರೆ ಮತ್ತೆ ಸಾಲ: ಕಿಶೋರ್‌ಕುಮಾರ್
ಮಾಲೂರು: ಬ್ಯಾಂಕಿನಿಂದ ಸಾಲ ಪಡೆದವರು ಜೂ.30ರೊಳಗೆ ಮರುಪಾವತಿ ಮಾಡಿದರೆ, ರಿಯಾಯ್ತಿ ಜತೆಯಲ್ಲಿ ಮತ್ತೆ ಸಾಲ ನೀಡುವ ಸೌಲಭ್ಯ ನೀಡಲಾಗುವುದು ಎಂದು ಕಾರ್ಪೊರೇಷನ್ ಬ್ಯಾಂಕ್‌ನ ಮುಖ್ಯ ಕಚೇರಿಯ ಕೃಷಿ ಅಧಿಕಾರಿ ಕಿಶೋರ್ ಕುಮಾರ್ ಹೇಳಿದರು.
ಚೂಕ್ಕಂಡಹಳ್ಳಿ-ಮಡಿವಾಳ ಗ್ರಾಮದಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ತಾಲೂಕಿನ ಯಶವಂತಪುರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 'ಸಾಲ ಮರುಪಾವತಿ-ವಸೂಲಿ ಮೇಳ'ದಲ್ಲಿ ಈ ವಿಷಯ ತಿಳಿಸಿದರು.
ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ಇರುವವರೆಗೆ ಒಂದು ಉತ್ತಮ ಅವಕಾಶ ಬ್ಯಾಂಕ್ ಕಲ್ಪಿಸಿಕೊಟ್ಟಿದೆ. ಕೃಷಿಗಾಗಿ, ಸ್ತ್ರಿಶಕ್ತಿ ಗುಂಪು, ವಾಣಿಜ್ಯ-ವ್ಯಾಪಾರಕ್ಕಾಗಿ ಸಾಲ ಪಡೆದವರು ಜೂ.30ರೊಳಗೆ ಮರುಪಾವತಿ ಮಾಡಬೇಕು. ಅಂಥವರಿಗೆ ಮತ್ತೆ ಸಾಲ ನೀಡಲಾಗುವುದು ಎಂದು ಅವರು ತಿಳಿಸಿದರು.
ಸ್ಥಳೀಯ ಶಾಖೆಯ ವ್ಯವಸ್ಥಾಪಕ ಜಯದೇವ ಪೈ, ಮುಖ್ಯ ಕಚೇರಿಯ ಅಧಿಕಾರಿ ಸುಮಿತ್ರಾ, ನಾಗರಾಜ ಗೌಡ, ಡೈರಿ ಮುನಿರಾಜು, ವೆಂಕಟರಾಂ ಇದ್ದರು. ಮೇಳದಲ್ಲಿ ಯಶವಂತಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸ್ತ್ರೀ ಶಕ್ತಿ ಗುಂಪಿನ ಕಾರ್ಯಕರ್ತೆಯರು, ರೈತರು ಭಾಗವಹಿಸಿದ್ದರು.
ಕೌಶಲ್ಯ ಹೆಚ್ಚಿಸಿಕೊಂಡು ಉತ್ತಮ
ತೀರ್ಪುಗಾರರಾಗಿ: ಹನುಮಂತೇಗೌಡ
ಚಿಕ್ಕಬಳ್ಳಾಪುರ: ನಿರಂತರವಾಗಿ ತಮ್ಮ ಜ್ಞಾನ, ಸಾಮರ್ಥ್ಯ, ಕೌಶಲ್ಯವನ್ನು ಹೆಚ್ಚಿಸಿಕೊಂಡು ನುರಿತ ತೀರ್ಪುಗಾರರಾಗಿ ರೂಪುಗೊಳ್ಳಬೇಕೆಂದು ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ಎಂ.ಹನುಮಂತೇಗೌಡ ತಿಳಿಸಿದರು.
ನಗರದ ಹೊರ ವಲಯದ ಕೆ.ವಿ.ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಹಾಗೂ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಏರ್ಪಡಿಸಿದ್ದ ರಾಜ್ಯ ಮಟ್ಟದ ತೀರ್ಪುಗಾರರ ಪುನಶ್ಚೇತನ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ತೀರ್ಪುಗಾರರು ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸುವುದರ ಜೊತೆಗೆ ಇತರರಿಗೆ ಮಾದರಿಯಾಗಿ ರೂಪುಗೊಳ್ಳಬೇಕಾದರೆ ಕ್ರೀಡೆಗಳ ತಾತ್ವಿಕ ಮತ್ತು ಪ್ರಾಯೋಗಿಕ ಜ್ಞಾನ ಅಗತ್ಯ. ಶಿಸ್ತು, ಸಂಯಮ ಹಾಗೂ ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡ ಉತ್ತಮ ನಿರ್ಣಯ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರ ಡಾ.ಈಶ್ವರ್ ಅಂಗಡಿ, ನಗರಸಭಾ ಸದಸ್ಯೆ ನಿರ್ಮಲಾಪ್ರಭು ಮಾತನಾಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 100 ಕ್ಕೂ ಹೆಚ್ಚು ತರಬೇತುದಾರರು ಕಾರ್ಯಾಗಾರದ ಪ್ರಯೋಜನವನ್ನು ಪಡೆದರು.
ಕಾರ್ಯಕ್ರಮದಲ್ಲಿ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷ ಎ.ಕೃಷ್ಣಮೂರ್ತಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎ.ಎಸ್. ಅಮರೇಂದ್ರ, ಸಂಘಟನಾ ಕಾರ್ಯದರ್ಶಿ ಸಿ.ಎಲ್ . ಶ್ರೀನಿವಾಸ್, ಖಜಾಂಚಿ ಎನ್. ಸತ್ಯನಾರಾಯಣ್, ಜಿಲ್ಲಾ ತೀರ್ಪುಗಾರ ಮಂಡಳಿಯ ಅಧ್ಯಕ್ಷ ಜಿ.ಅಶ್ವತ್ಥಪ್ಪ, ಕೆ.ವಿ.ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್ .ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.