ಈ ಶಾಲೆ ಸಮಸ್ಯೆಗೆ ಮುಕ್ತಿ ಎಂದು?
ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿ ಪುರ ಪಂಚಾಯ್ತಿ ವ್ಯಾಪ್ತಿಯ ಬಿಸಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಚಾವಣಿಯು ಚಿಂಗ್ ಶೀಟ್‌ಗಳನ್ನು ಹೊಂದಿದ್ದು, ನಿತ್ಯ ಸಾಕಷ್ಟು ತೊಂದರೆಗಳಾಗುತ್ತಿದೆ.
ಈ ಶಾಲೆ ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದು, ಆಗಿನ ಪಟೇಲರು ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕೆ ಅನುವಾಗುವಂತೆ ಹೆಂಚಿನ ಮೇಲ್ಚಾವಣಿ ಹಾಕಿಸಿದ್ದರು. ಕಾಲಾಂತರದಲ್ಲಿ ಈ ಚಾವಣಿ ತೆಗೆದು ಕಡಿಮೆ ವೆಚ್ಚದಲ್ಲಿ ಜಿಂಕ್‌ಶೀಟ್‌ಗಳನ್ನು ಹಾಕಲಾಗಿದೆ. ಆದರೆ, ನಿತ್ಯ ಆ ಕಟ್ಟಡಗಳಲ್ಲಿ ಕುಳಿತು ಪಾಠ ಪ್ರವಚನ ಮಾಡುವ ಶಿಕ್ಷಕರ ಹಾಗೂ ಕಲಿಯುವ ಮಕ್ಕಳ ಯಾತನೆ ಹೇಳತೀರದು. ಬೇಸಿಗೆಯಲ್ಲಿನ ಉರಿ ಬಿಸಿಲಿನಿಂದ ತರಗತಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಮಕ್ಕಳು ಶಿಕ್ಷಕರು ಶಾಲೆಯ ಆವರಣದಲ್ಲಿನ ಮರಗಳನ್ನು ಆಶ್ರಯಿಸಬೇಕಾಗಿದೆ. ಇನ್ನು ಮಳೆಗಾಲದಲ್ಲಿ ಮಳೆ ನಿಂತರೂ ಮಳೆಹನಿ ನಿಲ್ಲದಂತಹ ಪರಿಸ್ಥಿತಿಯಲ್ಲಿದೆ. ಉಳಿದ ದಿನಗಳಲ್ಲಿ ಕೋತಿಗಳು, ಪಕ್ಷಿಗಳು ಮೇಲ್ಚಾವಣಿ ಮೇಲೆ ಓಡಾಡುವುದರಿಂದ ಮಕ್ಕಳ ಬೋಧನೆಗೆ ತೀವ್ರ ಅಡ್ಡಿಯಾಗಿದೆ. ಪ್ರಸ್ತುತ ಶಾಲೆ ನಡೆಯುತ್ತಿರುವ ಜಾಗವು ಅದೇ ಗ್ರಾಮದ ಸುಬ್ಬರಾಯಪ್ಪ ಎಂಬುವವರು ಸುಮಾರು ವರ್ಷಗಳ ಹಿಂದೆ ದಾನವಾಗಿ ನೀಡಿದ್ದರು. ಅದರಲ್ಲಿ ಸ್ವಲ್ಪ ಜಾಗವನ್ನು ತಮ್ಮ ಸಂಬಂಧಿ ನರಸೇಗೌಡ ಎಂಬುವವರಿಗೆ ಬರೆದುಕೊಟ್ಟಿದ್ದಾರೆ. ಆದರೆ ನರಸೇಗೌಡ, ಇಡೀ ಜಾಗವೇ ತಮ್ಮ ಹೆಸರಲ್ಲಿದೆ. ಇದರಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು ಎಂದು ತಕರಾರು ತೆಗೆದಿದ್ದಾನೆ. ಆದ್ದರಿಂದ ಕಳೆದ ಹತ್ತು ವರ್ಷಗಳಿಂದ ಈ ಶಾಲೆಯಲ್ಲಿ ನಯಾಪೈಸೆ ಅಭಿವೃದ್ಧಿಯ ಕಾಮಗಾರಿಯೂ ನಡೆದಿಲ್ಲ. ಮಕ್ಕಳಿಗೆ ಬೋಧಿಸಲು ಸಾಧ್ಯವಾಗದಷ್ಟು ಜವಾಬ್ದಾರಿಗಳು ಶಿಕ್ಷಕರ ಮೇಲಿವೆ.
ಅಂಥದ್ದರಲ್ಲಿ ಈ ಶಾಲೆಯ ಮುಖ್ಯ ಶಿಕ್ಷಕಿಯು ಶಾಲಾ ಜಮೀನು ವಿವಾದದಡಿಯಲ್ಲಿರುವ ತಕರಾರು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ವಾರಕ್ಕೆರಡು ಬಾರಿ ಕೋರ್ಟ್‌ಗೆ ಅಲೆಯುವ ಸ್ಥಿತಿ ಇಲ್ಲಿತ್ತು. ಇಡೀ ಗ್ರಾಮಸ್ಥರೆಲ್ಲರೂ ಶಾಲೆಯ ಪರವಾಗಿ ನಿಂತರೆ, ಜಮೀನು ವಿವಾದದಲ್ಲಿರುವ ವ್ಯಕ್ತಿಯೊಬ್ಬನೇ ಒಂದು ಪರವಾಗಿದ್ದಾನೆ ಎನ್ನತ್ತಾರೆ ಸ್ಥಳೀಯರು. ಸಮಸ್ಯೆ ಹಲವಾರು ದಿನಗಳಿಂದ ಬಗೆಹರಿಯದ ಕಾರಣ ಶಾಲೆ ಪ್ರಗತಿಯ ಹಾದಿ ಮಾತ್ರ ಹಿಡಿಯುತ್ತಿಲ್ಲ.
ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಶಾಲೆಯ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಮ್ಮೂರಿನ ಶಾಲೆಯ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಆಗಬೇಕಿದೆ. ಆದರೆ ಇಲ್ಲಿ ಉಲ್ಬಣವಾಗಿರುವ ಸಮಸ್ಯೆಯಿಂದ ಅವುಗಳಿಗೆ ತಡೆ ಉಂಟಾಗಿದ್ದು, ಶೀಘ್ರದಲ್ಲಿಯೇ ಪರಿಹಾರ ಕಂಡುಕೊಳ್ಳಲು ಚಿಂತಿಸಿ, ಅಭಿವೃದ್ಧಿ ಕಾರ್ಯಗಳಿಗೆ ಅನುವು ಮಾಡಿಕೊಡುತ್ತೇವೆ.
ಟಿ ನಾಗರಾಜಗೌಡ, ಸ್ಥಳೀಯ