ಕಲ್ಯಾಣಿ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ
ಕೋಲಾರ: ತಾಲೂಕಿನ ಸೀತಿ ಗ್ರಾಮದಲ್ಲಿ ಕಲ್ಯಾಣ ಮಂಟಪದ ಮುಂದೆ ಕಲ್ಯಾಣಿಯ ದುರಸ್ತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಸೀತಿ ಹೊಸೂರು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಗ್ರಾಮದ ಮುಖಂಡರಾದ ಮುನೇಗೌಡ, ಟಿ.ರಮೇಶ್, ಚಂಚಿಮಲೆ ಎಂ.ನಾಗರಾಜ್ ಅವರುಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಗ್ರಾಮ ಪಂಚಾಯತಿ ವತಿಯಿಂದ ಕಾಮಗಾರಿ ಕೈಗೊಂಡಿದ್ದು ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಎನ್. ರಮೇಶ್ ಪ್ರಸ್ತುತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಕಲ್ಯಾಣಿಯನ್ನು ದುರಸ್ತಿ ಮಾಡಿಸಲು ಮೂರು ಲಕ್ಷ ಅನುಮೋದನೆಯಾಗಿದ್ದು ಅದರಲ್ಲಿ 8000 ಸಾವಿರದಷ್ಟು ಬರಿ ಮಣ್ಣಿನ ಕೆಲಸ ಮಾತ್ರ ಮಾಡಿಸಿ ಸುಳ್ಳು ಬಿಲ್ಲುಗಳನ್ನು ಸೃಷ್ಟಿಸಿ 3 ಲಕ್ಷ ಹಣವನ್ನು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕಾರ್ಮಿಕರ ಹೆಸರಿನಲ್ಲಿ ಮೊತ್ತವನ್ನು ಡ್ರಾ ಮಾಡಿ ಗುಳುಂ ಮಾಡಿರುತ್ತಾರೆ ಎಂದು ಆರೋಪಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಲ್ಯಾಣಿ ದುರಸ್ತಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಸಿದ್ದಾರೆ.