ರಾಜಮ್ಮ ಬಂಡಾಯ ಸಾಹಿತಿ ಅಲ್ಲ
ಕೋಲಾರ: ನಾಡಿನ ಶ್ರೇಷ್ಠ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾದ ದಿವಂಗತ ಉತ್ತನೂರು ರಾಜಮ್ಮ ಅವರನ್ನು ಬಂಡಾಯ ಸಾಹಿತಿ ಎಂದು ಕರೆಯುವುದು ಸರಿಯಲ್ಲ, ಇವರ ಬರಹಗಳಲ್ಲಿ ತಾಯಿಯ ಮಮತೆಯನ್ನು ಪ್ರತಿಬಿಂಭಿಸುವ, ಅದರಂತೆ ಬದುಕನ್ನು ಹೋಲುವ ಸಾಹಿತ್ಯವನ್ನು ಕಾಣಬಹುದಾಗಿದೆ ಎಂದು ಸಾಹಿತಿ ಸಾ. ರಘುನಾಥ್ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪತ್ರಕರ್ತರ ಭವನದಲ್ಲಿ ಗುರುವಾರ ಉತ್ತನೂರು ರಾಜಮ್ಮ ಜನ್ಮೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಉತ್ತನೂರು ರಾಜಮ್ಮನವರ ಸಮಗ್ರ ಸಾಹಿತ್ಯ ಬಿಡುಗಡೆ ಹಾಗೂ ಉತ್ತನೂರು ರಾಜಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ರಾಜಮ್ಮನವರ ಬದುಕು-ಬರಹಗಳ ಬಗ್ಗೆ ಮಾತನಾಡಿದರು.
ರಾಜಮ್ಮ ಅವರೆಂದೂ ತಮ್ಮ ಬದುಕನ್ನು ದೊಡ್ಡ ರೀತಿಯಲ್ಲಿ ತೋರಿಸಿಕೊಂಡವರಲ್ಲ, ಅದರೆ ಅವರ ಸರಳತೆಯ ಬದುಕು ಹಾಗೂ ಸಾಹಿತ್ಯ ಕೃಷಿಯು ದೊಡ್ಡ ರೀತಿಯಲ್ಲಿ ಬದುಕುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟ ಅವರು, ನೆಲದ ಬದುಕು ಹಾಗೂ ಮಣ್ಣಿಗೆ ಕೊಡಬೇಕಾದ ನ್ಯಾಯದ ಬಗ್ಗೆ ಅವರ ಮನಸ್ಸು ಸದಾ ಮಿಡಿಯುತ್ತಿತ್ತು ಎಂದು ಪ್ರತಿಪಾದಿಸಿದರು.
ಅವರು ಯಾವುದೇ ಪಿ.ಹೆಚ್.ಡಿ ಮಾಡಿದವರಲ್ಲ ಆದರೆ ಅವರು ಬರೆದಿರುವ ಪುಸ್ತಕಗಳು ಪಿ.ಹೆಚ್.ಡಿ ಸಂಶೋಧನೆಗೆ ಅರ್ಹವಾಗಿವೆ, ಗ್ರಾಮೀಣ ಬದುಕಿನಲ್ಲಿ ಸಗಣಿಯ ವಾಸನೆಯಲ್ಲಿ ಬೆಳೆದು ಬಂದ ಅವರು ಆದೇ ವಾತಾವರಣದಲ್ಲಿ ಸಾಹಿತ್ಯ ಅರಳಿತು ಎಂದ ಅವರು, ಸದಾ ಸರಳತೆಯಲ್ಲಿ ಇದ್ದುಕೊಂಡು ಬಡವರ, ನೊಂದ ಮನಸ್ಸುಗಳನ್ನು ಅರಿತು ಅದನ್ನು ಬರಹ ರೂಪದಲ್ಲಿ ದಾಖಲಿಸುತ್ತಿದ್ದರು ಎಂದರು.
ಮಾನವೀಯತೆಯ ಸಾಹಿತಿ ಎಂದರೆ ಉತ್ತನೂರು ರಾಜಮ್ಮ ನೆನಪಾಗುತ್ತಾರೆ ಆದರೆ ತೋರಿಕೆ- ಮೇಕಪ್ ಎಂದರೆ ಯು.ಆರ್. ಅನಂತ ಮೂರ್ತಿ, ಲವ್ಬ್ಯಾಂಡ್ ಎಂದರೆ ಗಿರೀಶ್ ಕಾರ್ನಾಡ್ ನೆನಪಾಗುತ್ತಾರೆ, ಇಂತಹವರಿಂದ ಸಮಾಜಕ್ಕೆ ಏನಾಗುತ್ತಿದೆ ಎಂಬುದು ಜನರಿಗೆ ಅರ್ಥವಾಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಉತ್ತನೂರು ರಾಜಮ್ಮ ಸಮಗ್ರ ಸಾಹಿತ್ಯ ಸಂಪಾದಕ ಪ್ರೊ. ಎನ್. ಚಂದ್ರಪ್ಪ ಅವರು ಮಾತನಾಡಿ, ಉತ್ತನೂರು ರಾಜಮ್ಮ ಅವರ ಸಾಹಿತ್ಯ ಕೃಷಿಯಲ್ಲಿ ಹೃಯವಂತಿಕೆಯನ್ನು ಕಾಣಬಹುದೆಂದರು.
ಉತ್ತನೂರು ರಾಜಮ್ಮ ಪ್ರಶಸ್ತಿ ಸ್ವೀಕರಿಸಿದ ಬರಹಗಾರ ಎನ್. ಜಗನ್ನಾಥ್ ಪ್ರಕಾಶ್ ಮಾತನಾಡಿ, ಕೋಲಾರ ಜಿಲ್ಲೆಯ ಗ್ರಾಮ್ಯ ಭಾಷೆಯ ಸೊಗಡನ್ನು ಸದಾ ಉಳಿಸಿಕೊಂಡು ಬಂದವರು ರಾಜಮ್ಮನವರು ಎಂದು ವಿವರಿಸಿ, ಅವರ ಹೆಸರಿನ ಮೊದಲ ಪ್ರಶಸ್ತಿಗೆ ತನ್ನನ್ನು ಆಯ್ಕೆ ಮಾಡಿ ನೀಡಿರುವುದು ಜೀವಮಾನದಲ್ಲಿ ಮರೆಯಲಾರದ ಅನುಭವ ಎಂದರು ಹೇಳಿದರು.
ಅನಂತಪುರಂನ ಕೃಷ್ಣದೇವರಾಯ ವಿ.ವಿ. ವಿಶ್ರಾಂತ ಪ್ರಾಧ್ಯಾಪಕ ಡಾ. ಶೇಷಾಶಾಸ್ತ್ರಿ ಅವರು ಸಮಗ್ರ ಗದ್ಯಾವಲೋಕನದ ಬಗ್ಗೆ ಮಾತನಾಡಿ, ರಾಜಮ್ಮನವರ ಕೃತಿಗಳಲ್ಲಿ ಕೋಲಾರ ಜಿಲ್ಲೆಯ ಗ್ರಾಮೀಣ ಸೊಗಡಿನ ಭಾಷೆ, ಬದುಕು, ಭಾವನೆಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆಂದರು.
ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ. ನಾಗರಾಜಜ್ಪುಸ್ತಕಗಳ ಬಿಡುಗಡೆಗೊಳಿಸಿದರು, ಚಿಕ್ಕಬಳ್ಳಾಪುರ ಕ.ಸಾ.ಪ ಅಧ್ಯಕ್ಷ ಎಲ್. ಹನುಮಂತರಾವ್ ಅವರಿಂದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು, ಹಿರಿಯ ಸಂಪಾದಕ ಕೆ. ಪ್ರಹ್ಲಾದರಾವ್ ಪ್ರಶಸ್ತಿ ಪ್ರದಾನ ಮಾಡಿದರು, ಕವಿ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ ಸಮಗ್ರ ಕಾವ್ಯವಲೋಕನದ ಬಗ್ಗೆ ಮಾತನಾಡಿದರು,
ಮುಖ್ಯ ಅತಿಥಿಗಳಾಗಿ ಉತ್ತನೂರು ರಾಜಮ್ಮ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ವಕೀಲ ಎನ್. ವಿಶ್ವನಾಥ್ ಶೆಟ್ಟಿ, ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಕ.ಸಾ.ಪ. ಮಾಜಿ ಅಧ್ಯಕ್ಷ ಕಾ.ನಾ. ಶ್ರೀನಿವಾಸ್ ವೇದಿಕೆಯಲ್ಲಿದ್ದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕರು ಹಾಗೂ ಪ್ರಶಸ್ತಿ ಸಮಿತಿ ಸದಸ್ಯ ಬಿ.ಎಸ್. ವೆಂಕಟಾಚಲಪತಿ ಅಧ್ಯಕ್ಷತೆ ವಹಿಸಿದ್ದರು.