ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆಂಪೇಗೌಡಗೆ ಉಘೇ ಉಘೇ

Rashmi Kasaragodu
Updated On : 15 Jun 2014, 1:37 am

ನಾಡಪ್ರಭು ಕೆಂಪೇಗೌಡರ ಜಯಂತಿ, ಕುಣಿದು ಕುಪ್ಪಳಿಸಿದ ಜನರು


ಕೋಲಾರ: ಜಿಲ್ಲಾ ಒಕ್ಕಲಿಗರ ಸಂಘದಿಂದ ಶನಿವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆ ವರ್ಣರಂಜಿತವಾಗಿತ್ತು.
ಹತ್ತಾರು ಹಳ್ಳಿಗಳಿಂದ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶನ ನೀಡಿದರು.
ಸಮುದಾಯದ ಹಿರಿಯರು ಶ್ವೇತ ವರ್ಣದ ಪಂಚೆ, ಶರ್ಟು, ಹೆಗಲ ಮೇಲೆ ಟವಲು ಧರಿಸಿ ಅಪ್ಪಟ ರೈತರಂತೆ ಕಂಗೋಳಿಸಿದರು. ಯುವಕರು ಕೆಂಪು, ಹಸಿರು, ಹಳದಿ ಬಣ್ಣದ ಟೀ ಶರ್ಟ್‌ಗಳೊಂದಿಗೆ ಬೈಕ್ ರ್ಯಾಲಿ, ಚರ್ಮ ವಾದ್ಯಕ್ಕೆ ತಕ್ಕಂತೆ ನೃತ್ಯ, ಸಾಹಸ ಪ್ರದರ್ಶನದ ಮೂಲಕ ಗಮನ ಸೆಳೆದರು. ಹಿರಿಯ ರಂಗ ಕಲಾವಿದ ಮದ್ದೇರಿ ಮುನಿರೆಡ್ಡಿ ಇನ್ನಿತರ ಸಹ ಕಲಾವಿದರು ಹಗಲು ವೇಷಧಾರಿಗಳಾಗಿ ಮೆರವಣಿಗೆಗೆ ಕಳೆ ತುಂಬಿದರೆ, ಪುಟ್ಟ ಬಾಲಕರು ಕೆಂಪೇಗೌಡರ ವೇಷದೊಂದಿಗೆ ಪಲ್ಲಕ್ಕಿಗಳಲ್ಲಿ ಮಿಂಚಿದರು. ಜಿಲ್ಲಾ ಒಕ್ಕಲಿಗರ ಸಂಘದ ಮುಖಂಡರಾದ ಗೌರವಾಧ್ಯಕ್ಷ ಬಿಸ್ಸೇಗೌಡ, ಅಧ್ಯಕ್ಷ ಕೆ.ವಿ.ಶಂಕರಪ್ಪ, ಉಪಾಧ್ಯಕ್ಷ ಕೆ.ಎನ್. ನಾಗರಾಜ್, ವಿ.ಕೃಷ್ಣಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಡಾ. ಕೆ.ಎಂ.ಜೆ. ಮೌನಿ, ಜಂಟಿ ಕಾರ್ಯದರ್ಶಿ ಕೆ.ವಿ.ನಾರಾಯಣಸ್ವಾಮಿ, ಖಜಾಂಚಿ ಗೋವಿಂದರಾಜು, ನಿರ್ದೇಶಕರಾದ ಇ.ರಾಮಚಂದ್ರ, ಮುರಳಿಧರಗೌಡ ಇನ್ನಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಂಘದ ಮುಖಂಡರು ಯುವಕರೊಂದಿಗೆ ಕುಣಿದು ಕುಪ್ಪಳಿಸಿ ಮೆರವಣಿಗೆಗೆ ಮೆರಗು ನೀಡಿದರು. ಕೇರಳದ ಚಂಡಿ ವಾದ್ಯ, ವೀರಗಾಸೆ ಕುಣಿತ, ಗಾರುಡಿ ಗೊಂಬೆ ನೃತ್ಯ, ಮರಕಾಲು ಕುಣಿತ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಒಕ್ಕಲಿಗ ಸಮುದಾಯದ ಸಾವಿರಾರು ಮಂದಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement