ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಚಿಂತಾಮಣಿ: ಕಾಮಗಾರಿ ಗುಣಮಟ್ಟವನ್ನು ಕಾಪಾಡಬೇಕೆಂದು ಗುತ್ತಿಗೆದಾರ ಹಾಗೂ ಅಧಿಕಾರಿಗಳಿಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ರಾಜಣ್ಣ ಕರೆ ನೀಡಿದರು.
ಅವರು ತಾಲೂಕಿನ ಚಿಲಕಲನೇರ್ಪು ಹೋಬಳಿ ಕೋನೇಪಲ್ಲಿ ಹಾಗೂ ಗೋನೇಪಲ್ಲಿ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಎಸ್.ಇ.ಪಿ ಯೋಜನೆಯಡಿಯಲ್ಲಿ ತಲಾ 6 ಲಕ್ಷ ರು. ನಲ್ಲಿ 2 ಗ್ರಾಮಗಳಲ್ಲಿ 12 ಲಕ್ಷ ರು. ಮೊತ್ತದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ್,ಗ್ರಾ.ಪಂ. ಅಧ್ಯಕ್ಷ ವೆಂಕಟರವಣಪ್ಪ, ಮುಖಂಡರಾದ ನಡುಂಪಲ್ಲಿ ಶ್ರೀನಿವಾಸ್, ಮಂಜುನಾಥರೆಡ್ಡಿ,ದೇವರಾಜ್, ರಾಮಚಂದ್ರಾರೆಡ್ಡಿ, ವೆಂಕಟರಾಮರೆಡ್ಡಿ, ರೆಡ್ಡೆಪ್ಪ,ಜಂಗಾಲಹಳ್ಳಿ ಬೈರಾರೆಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಮಕ್ಕಳು ವಿದ್ಯಾಭ್ಯಾಸದತ್ತ ಗಮನಹರಿಸಬೇಕು
ಬಂಗಾರಪೇಟೆ: ಗಡಿ ಪ್ರದೇಶದ ಮಕ್ಕಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಮಹೇಂದ್ರ ಆ್ಯಂಡ್ ಮಹೇಂದ್ರ ಫೈನಾನ್ಸ್ ಕಂಪನಿಯ ರೀಜಿನಲ್ ಮ್ಯಾನೇಜರ್ ಎಚ್.ಪ್ರದೀಪ್ ಮಕ್ಕಳಿಗೆ ಕರೆ ನೀಡಿದರು.
ತಾಲೂಕಿನ ಯಳೇಸಂದ್ರ ಗ್ರಾಪಂ ರಾಮಸಂದ್ರ ಗ್ರಾಮದಲ್ಲಿನ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹೇಂದ್ರ ಕಂಪನಿ ಮತ್ತು ಫೋಕಸ್ ಸಂಸ್ಥೆಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿಸಿ ಮಾತನಾಡುತ್ತಿದ್ದರು. ಸ್ವಯಂ ಸೇವಾ ಸಂಸ್ಥೆಗಳು ನೀಡುತ್ತಿರುವ ಸಹಾಯವನ್ನು ಪಡೆದುಕೊಂಡು ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಬೇಕಿದೆ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳೇ ಇಂದು ಹೆಚ್ಚಿನ ರೀತಿಯಲ್ಲಿ ಉನ್ನತ ವ್ಯಾಸಂಗ ಪಡೆಯುತ್ತಿದ್ದಾರೆ ಎಂದು ಹೇಳಿದರು. ಎ.ಹರೀಶ್ ಮಾತನಾಡಿದರು.