ಅಧಿಕೃತ ಬಡಾವಣೆ ಕಟ್ಟಡ ತೆರವಿಗೆ ವಿರೋಧ
ಮಾಲೂರು: ನಾಲ್ಕೈದು ದಶಕಗಳ ಹಿಂದಿನ ನಕ್ಷೆಯನ್ನು ಆಧಾರವಾಗಿಟ್ಟುಕೊಂಡು ಅಧಿಕೃತ ಬಡಾವಣೆಯ ಕೋಟ್ಯಂತರ ಮೌಲ್ಯದ ಕಟ್ಟಡಗಳನ್ನು ತೆರವುಗೊಳಿಸುವುದನ್ನು ತಾವು ವಿರೋಧಿಸುವುದಾಗಿ ಶಾಸಕ ಮಂಜುನಾಥ್ ಗೌಡ ಹೇಳಿದರು.
ಅವರು ಮಂಗಳವಾರ ಪಟ್ಟಣದ ಅರಳೇರಿ ರಸ್ತೆ ಹಾಗೂ ಬಡಾವಣೆಯನ್ನು ವೀಕ್ಷಿಸಿದ ಬಳಿಕ ಪತ್ರಕರ್ತರೊಡನೆ ಮಾತನಾಡಿ, ಐದು ದಶಕಗಳ ಹಿಂದೆ ಪಟ್ಟಣದ ಹೊರವಲಯವಾಗಿದ್ದ ಈ ಪ್ರದೇಶದಲ್ಲಿ ಕೇವಲ ತೋಪುಗಳು ಬೆಳೆದಿದ್ದವು. ಕಾಲಕ್ರಮೇಣ ಮಾಲೂರು ನಗರ ಬೆಳೆದಂತೆ ಇಲ್ಲಿ ನೂತನ ಬಡಾವಣೆಗಳು ನಿರ್ಮಾಣವಾಗಿದ್ದವು ಎಂದರು.
ಅಧಿಕೃತ ಬಡಾವಣೆ: ಅದೇ ರೀತಿಯಲ್ಲಿ ಆದರ್ಶ ನಗರ ನಿರ್ಮಾಣವಾಗಿದ್ದು, ಮೂರು ದಶಕಗಳ ಹಿಂದೆ ಸರ್ಕಾರದ ಅಂಗೀಕೃತ ಬಡಾವಣೆಯಾಗಿದೆ. ಇಲ್ಲಿರುವ ರಸ್ತೆ ಮಾಲೂರು ಪಟ್ಟಣದಲ್ಲೇ ಅತಿ ಅಗಲದ ರಸ್ತೆಯಾಗಿದ್ದು, ಯಾವೂದೇ ಸಂಚಾರಕ್ಕೂ ತೊಂದರೆ ಯಾಗುತ್ತಿಲ್ಲ. ರಾಜ್ಯ ಸರ್ಕಾರವು ಈ ಬಗ್ಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಇಲ್ಲಿನ ಕಟ್ಟಡಗಳನ್ನು ತೆರವುಗೊಳಸದೆ ನಿವಾಸಿಗಳಿಗೆ ನ್ಯಾಯ ದೂರಕಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಸಂಸದ ಕೆ.ಎಚ್.ಮುನಿಯಪ್ಪರವರು ತಮ್ಮದೇ ಆಗಿರುವ ರಾಜ್ಯ ಸರ್ಕಾರಕ್ಕೆ ಇಲ್ಲಿನ ಪರಿಸ್ಥಿತಿಯ ವಾಸ್ತವ ಸಂಗತಿ ತಿಳಿಸಿ ಜನಪ ಪರ ನಿಲ್ಲಬೇಕು ಎಂದು ಅಗ್ರಹಿಸಿದರು.
ಹೋರಾಟದ ಎಚ್ಚರಿಕೆ: ಈ ಬಗ್ಗೆ ರಾಜ್ಯ ಸರ್ಕಾರವು ವಿಶೇಷ ಆಸಕ್ತಿ ತೋರಿಸಿ ಇಲ್ಲಿಯ ಕಟ್ಟಡಗಳನ್ನು ಉಳಿಸಬೇಕು. ಇಲ್ಲದಿದ್ದಲಿ ಕಾನೂನು ಹೋರಾಟ ಜತೆಯಲ್ಲಿ ಸಾರ್ವಜನಿಕರೂಡನೆ ಬೀದಿಗಿಳಿಯುವ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು. ವಕೀಲ ಸಂಘದ ಅಧ್ಯಕ್ಷ ಆರ್.ಸಿ.ಅಪ್ಪಾಜಿ ಗೌಡ, ಹಿರಿಯ ವಕೀಲ ಸೋಮಶೇಖರ್, ಕೋಚಿಮುಲ್ ನಿರ್ದೇಶಕ ನಂಜೇಗೌಡ, ಪುರಸಭೆ ಸದಸ್ಯ ಲಿಂಗೇಶ್ವರಯ್ಯ, ಮಾ.ಬಾ.ಅಮರ್ ಸಿಂಗ್, ಆನೇಪುರ ಹನುಮಂತಪ್ಪ, ಜಯರಾಂ, ವಿ.ಶ್ರೀನಿವಾಸ್, ಲಕ್ಷ್ಮಯ್ಯ, ಚಂದ್ರಶೇಖರ್, ಚೀಟಿ ಲೋಕೇಶ್, ಗಂಗಾಧರಯ್ಯ, ಕೋಳಿ ನಾರಾಯಣ್, ಬಾಗಲೂರು ಮಂಜು ಇದ್ದರು.