ಅಭಿವೃದ್ಧಿ ಕಾರ್ಯಗಳತ್ತ ಗಮನವಿರಲಿ
ಚಿಕ್ಕಬಳ್ಳಾಪುರ: ಆಗಾಗ ಜಿಲ್ಲಾ ವ್ಯಾಪ್ತಿಯಲ್ಲಿನ ಗ್ರಾ.ಪಂ.ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಭಿವೃದ್ಧಿ ಕೆಲಸಗಳ ಪ್ರಗತಿಯನ್ನು ಪರಿಶೀಲಿಸಬೇಕು. ಒಂದು ವೇಳೆ ಆ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು, ಸಮರ್ಪಕ ರೀತಿಯಲ್ಲಿ ಪ್ರಗತಿಯನ್ನು ಸಾಧಿಸದಿರುವುದು ಕಂಡು ಬಂದಲ್ಲಿ, ಸಂಬಂಧಪಟ್ಟ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಅಮಾನತುಗೊಳಿಸಬೇಕೆಂದು ಸಂಸದ ಎಂ. ವೀರಪ್ಪ ಮೊಯ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದರು.
ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಭೆಯಲ್ಲಿ ಪಂಚಾಯತ್ ರಾಜ್ ಹಣಕಾಸು ನಿರ್ವಹಣೆ, ಉದ್ಯೋಗ ಖಾತ್ರಿ ಯೋಜನೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿಯನ್ನು ತಿಳಿದುಕೊಂಡ ಅವರು, ಇಂದಿರಾ ಅವಾಜ್ ಯೋಜನೆಯಲ್ಲಿ ಕೇವಲ ಶೇ.11ರಷ್ಟು ಸಾಧನೆ ತೋರಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಲೆಕ್ಕಾಚಾರ: ಸಾಧನೆಯು ತೀರಾ ಕೆಳ ಮಟ್ಟದಲ್ಲಿದ್ದರೂ, ಯೋಜನೆಯ ಪ್ರಗತಿಗೆ ಏಕೆ ಕ್ರಮ ಕೈಗೊಳ್ಳಲಿಲ್ಲ. ಒಟ್ಟಾರೆ ಹಿಂದಿನ ಸಾಧನೆಯನ್ನು ಈಗಲೂ ಲೆಕ್ಕಾಚಾರ ಹಾಕಿಕೊಂಡು ಬರುತ್ತಿದ್ದು, ಕಳೆದ ಸಾಲಿನ ಪ್ರಗತಿಯ ಬಗ್ಗೆ ಅಸ್ಪಷ್ಟವಾಗಿ ತಿಳಿಸಿರುವುದು ಏತಕ್ಕೆ ಎಂದು ಖಾರವಾಗಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನ್ನು ಪ್ರಶ್ನಿಸಿದರು.
ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್ .ಶಿವಶಂಕರರೆಡ್ಡಿ, ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡಿ, ನರೇಗಾ ಮತ್ತು ನಿರ್ಮಲ್ ಭಾರತ್ ಯೋಜನೆಯಲ್ಲಿ ಶೌಚಾಲಯಗಳನ್ನು ನಿಯಮಾನುಸಾರ ನಿರ್ಮಿಸಿಕೊಂಡು ಒಂದೂವರೆ ವರ್ಷ ಕಳೆಯುತ್ತಿದ್ದರೂ, ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಫಲಾನುಭವಿಗಳು ಹಣವನ್ನು ಕೇಳಿದಾಗ ಆನ್ಲೈನ್ನಲ್ಲಿ ನೋಂದಣಿ ಮಾಡಬೇಕು. ಆನ್ಲೈನ್ ಲಾಕ್ ಆಗಿದೆ ಎಂದೆಲ್ಲಾ ವಿಳಂಬ ಮಾಡುತ್ತಿದ್ದಾರೆ. ಜಿ.ಪಂ.ನಲ್ಲಿ ಹಣವಿದೆ ಎನ್ನಲಾಗುತ್ತಿದ್ದರೂ, ಫಲಾನುಭವಿಗಳ ಕೈಗೆ ಹಣ ಹೋಗುತ್ತಿಲ್ಲ. ಇನ್ನು ಇಂದಿರಾ ಅವಾಜ್, ಬಸವಾ ಯೋಜನೆಯಲ್ಲಿ ಹಂತ ಹಂತವಾಗಿ ಹಣವನ್ನು ಬಿಡುಗಡೆ ಮಾಡುವಲ್ಲೂ ಸಹ ವಿಳಂಬ ಎದ್ದು ಕಾಣುತ್ತಿದೆ. ಅನೇಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಸಬೂಬು ಹೇಳುತ್ತಿದ್ದಾರೆ. ಇದರಿಂದ ಜನರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಅಸಡ್ಡೆ ಮೂಡುತ್ತಿದೆ ಎಂದರು.
ನಿರ್ಲಕ್ಷ್ಯ ಸಲ್ಲದು: ಇದಕ್ಕೆ ಪ್ರತಿಕ್ರಿಯಿಸಿದ ಮೊಯ್ಲಿ, ಸರ್ಕಾರದಿಂದ ಅನುದಾನ ಬರುತ್ತಿದ್ದರೂ ಸಹ, ಫಲಾನುಭವಿಗಳಿಗೆ ಹಣವನ್ನು ಕೊಡದೇ ಬಾಕಿ ಉಳಿಸಿಕೊಳ್ಳಬಾರದು. ಒಂದು ವೇಳೆ ಪಂಚಾಯತ್ ರಾಜ್ ಅಭಿವೃದ್ಧಿ ಮತ್ತು ಗ್ರಾ.ಪಂ. ಕಾರ್ಯದರ್ಶಿಗಳ ನಿರ್ಲಕ್ಷ್ಯದಿಂದ ಅನುದಾನ ಸರ್ಕಾರಕ್ಕೆ ಮತ್ತೆ ವಾಪಸ್ ಹೋಗಿ ವ್ಯರ್ಥವಾದರೆ ಅವರನ್ನೇ ಹೊಣೆಗಾರರನ್ನಾಗಿಸಬೇಕೆಂದು ತಿಳಿಸಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಿಂದೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಸಮಸ್ಯೆ ಎದುರಾಗಿದ್ದು, ತ್ವರಿತವಾಗಿ ಅನುದಾನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ ತಿಳಿಸಿದರು.
ವೆಚ್ಚ ಮಾಹಿತಿ: ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ 2013-14ನೇ ಸಾಲಿನಲ್ಲಿ 1,48,783 ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದೆ. 50,347ಕುಟುಂಬಗಳು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಇದರಲ್ಲಿ 29,742 ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. 6927 ಕಾಮಗಾರಿಗಳು ಪೂರ್ಣಗೊಂಡಿದ್ದು, ಈ ಪೈಕಿ 5465 ಶೌಚಾಲಯ ಕಾಮಗಾರಿಗಳು ಸೇರಿವೆ. ಒಟ್ಟಾರೆ ಒಟ್ಟು ಇಪ್ಪತ್ತು ಕೋಟಿ ರು. ವೆಚ್ಚವಾಗಿದೆ. ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 149046 ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದೆ. 19516 ಕುಟುಂಬಗಳು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿವೆ. 6275 ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. 567 ಕಾಮಗಾರಿಗಳು ಪೂರ್ಣಗೊಂಡಿವೆ. ಈ ಪೈಕಿ 361 ಶೌಚಾಲಯ ಕಾಮಗಾರಿಗಳು ಪೂರ್ಣಗೊಂಡಿದ್ದು, ಒಟ್ಟು 3 ಕೋಟಿ ವೆಚ್ಚವಾಗಿದೆ ಎಂದರು. ಸಭೆಯಲ್ಲಿ ಶಾಸಕ ಕೆ. ಸುಧಾಕರ್, ಕೇಶವರೆಡ್ಡಿ, ವೀಣಾ ಗಂಗುಲಪ್ಪ, ಸಿಇಒ ನೀಲಾ ಮಂಜುನಾಥ್, ಡಿಸಿ ವಿಶಾಲ್, ಎಸ್ಪಿ ದಿವ್ಯಾ ಗೋಪಿನಾಥ್ ಇದ್ದರು.