ಚೌಡರೆಡ್ಡಿ ಗೆಲ್ಲಿಸಿ: ಶಾಸಕ ಶಿವಶಂಕರ್ ಮನವಿ
ಕೋಲಾರ: ಇದೇ ಜೂ.20ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಆಗ್ನೇಯ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿಯವರನ್ನು ಗೆಲ್ಲಿಸಬೇಕೆಂದು ಜೆಡಿಎಸ್ ಮುಖಂಡ, ಹರಿಹರ ಶಾಸಕ ಶಿವಶಂಕರ್ ಮತದಾರರಿಗೆ ಕರೆ ನೀಡಿದರು.
ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಶಿಕ್ಷಕರು ಮತ್ತು ಪದವೀಧರರ ಸಮಸ್ಯೆಗಳಿಗೆ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಿದ್ದಾರೆ, ಇವರ ಕಾಲದಲ್ಲಿ ಸಿಕ್ಕ ಸಹಕಾರ ಬಿಜೆಪಿ ಅಧಿಕಾರದಲ್ಲಿದ್ದಾಗ ಸಿಗಲಿಲ್ಲ ಅದೇ ರೀತಿ ಕಾಂಗ್ರೆಸ್ ಆಳ್ವಿಕೆಯಲ್ಲೂ ಸಿಗುತ್ತಿಲ್ಲವೆಂದು ಆರೋಪಿಸಿದರು.
ಬಿಜೆಪಿ ಸರ್ಕಾರವಿದ್ದಾಗ ಪದವೀಧರರ ಸಮಸ್ಯೆಗಳನ್ನು ನಿವಾರಣೆ ಮಾಡಲು ಶಿವಯೋಗಿಸ್ವಾವು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ, ಈಗ ಮತ್ತೆ ಮತ ಕೇಳುತ್ತಿದ್ದಾರೆ, ಯಾವುದೇ ಆಮಿಷಗಳಿಗೆ ಬಲಿಯಾಗದೆ ಮತದಾರರು ಪ್ರಜ್ಞಾವಂತಿಕೆಯಿಂದ ತಮ್ಮ ಹಕ್ಕು ಚಲಾಯಿಸಬೇಕೆಂದು ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಯಾವುದೇ ಜನಪರ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿಲ್ಲ, ಪದವೀಧರರ ಸಮಸ್ಯೆಗಳನ್ನು ಈಡೇರಿಸಲು ಕಾಳಜಿ ತೋರುತ್ತಿಲ್ಲ, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ತಿರಸ್ಕರಿಸಿ ಜನಪರ ಹೋರಾಟಗಾರ ಚೌಡರೆಡ್ಡಿ ಅವರನ್ನು ಗೆಲ್ಲಿಸಿ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಪ್ರಭಾರ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯರಾದ ಮಂಗಮ್ಮ ಮುನಿಸ್ವಾಮಿ, ತೂಪಲ್ಲಿ ಆರ್.ನಾರಾಯಣಸ್ವಾಮಿ, ಬಣಕನಹಳ್ಳಿ ನಟರಾಜ್, ತಾಲೂಕು ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲಪ್ಪ, ಕೋಚಿಮುಲ್ ನಿರ್ದೇಶಕ ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ,ಮುಖಂಡರಾದ ಶೀಲಾ ನಾಯಕ್, ಶಂಕರೇಗೌಡ ಇದ್ದರು.
ಚಿಕ್ಕಬಳ್ಳಾಪುರದಲ್ಲಿ...
ಚಿಕ್ಕಬಳ್ಳಾಫುರ: ಪದವೀಧರರ ಸಮಸ್ಯೆಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ಸರ್ಕಾರಗಳು ಸಮರ್ಪಕ ರೀತಿಯಲ್ಲಿ ಸ್ಪಂದಿಸಲಿಲ್ಲ. ಅವು ಕೇವಲ ಹೇಳಿಕೆಗಳಲ್ಲಿ ಸಮಸ್ಯೆ ನಿವಾರಿಸುವ ಧೋರಣೆಯನ್ನು ಹೊಂದಿವೆ ಎಂದು ಹರಿಹರದ ಶಾಸಕ ಶಿವಶಂಕರ್ ಆರೋಪಿಸಿದರು. ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಆರ್. ಚೌಡರೆಡ್ಡಿ ಪರ ಪ್ರಚಾರ ನಡೆಸಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಕಳೆದ ಬಾರಿ ಚುನಾವಣೆಯಲ್ಲಿ ಚೌಡರೆಡ್ಡಿ ಕೆಲವು ಕಾರಣಗಳಿಂದಾಗಿ ಗೆಲ್ಲಲಿಲ್ಲ. ಈ ಬಾರಿ ಶೈಕ್ಷಣಿಕ ಕ್ಷೇತ್ರವನ್ನು ಸುಧಾರಿಸುವ ನಿಟ್ಟಿನಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಮತದಾರರು ಒಲವು ತೋರುತ್ತಿದ್ದಾರೆ ಎಂದರು.
ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿದರು. ಈ ವೇಳೆ, ಮುಖಂಡರಾದ ನಾರಾಯಣಸ್ವಾಮಿ, ಚದಲುಪುರ ನಾರಯಣಸ್ವಾಮಿ, ಪ್ರಕಾಶ್ ಇದ್ದರು.
ಚಿಂತಾಮಣಿಯಲ್ಲಿ...
ಚಿಂತಾಮಣಿ: ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ಅವರನ್ನು ಗೆಲ್ಲಿಸುವಂತೆ ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್.ನಾರಾಯಣರೆಡ್ಡಿ ಅವರು ಮನವಿ ಮಾಡಿದರು. ನಗರದ ನ್ಯಾಯಾಲಯದ ಆವರಣದಲ್ಲಿ ಚೌಡರೆಡ್ಡಿ ಅವರ ಪರವಾಗಿ, ಅವರ ಸಹೋದರ ನಾರಾಯಣಸ್ವಾಮಿ ಜೊತೆಯಲ್ಲಿ ಮತಯಾಚನೆ ಮಾಡಿದರು.
ಕಳೆದ 2 ದಶಕದಿಂದ ಶೈಕ್ಷಣಿಕ ರಂಗ ಮತ್ತು ಪದವೀಧರರ ಅಭಿವೃದ್ಧಿಗಾಗಿ ಚೌಡರೆಡ್ಡಿ ಹೋರಾಡುತ್ತಿದ್ದಾರೆ. ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಕೋಲಾರ ಜಿಪಂ ನಾರಾಯಣಸ್ವಾಮಿ ಕೂಡಾ ಮತಯಾಚನೆ ಮಾಡಿದರು. ಈ ವೇಳೆ, ಹೆಬ್ಬರಿ ಮಂಜುನಾಥರೆಡ್ಡಿ, ರಚನಾ ಈಶ್ವರಗೌಡ, ಶಿವಾನಂದ, ಶ್ರೀನಿವಾಸ್, ಆರ್.ಅಶೋಕ್, ಪ್ರಕಾಶ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.