ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜನಾಭಿಪ್ರಾಯ ಸಂಗ್ರಹಿಸಿ

Mainashree
Updated On : 17 Jun 2014, 11:38 am

ಕೋಲಾರ: ಬೆಂಗಳೂರಿನ ಬೆಳ್ಳಂದೂರು ಕೆರೆಯ ಸಮೀಪದ ಕೋರಮಂಗಲ-ಚಲಘಟ್ಟ ತ್ಯಾಜ್ಯ ಸಂಸ್ಕರಣಾ ಘಟಕದಿಂದ 150 ಎಂ.ಎಲ್.ಡಿ ನೀರನ್ನು ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುವ ಸಂಬಂಧ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ವರದಿ ಕಳುಹಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಾದ ಕೌಶಿಕ್ ಮುಖರ್ಜಿ ಕೋಲಾರ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರಿಗೆ ಸೂಚಿಸಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕೋಲಮಂಗಲ-ಚಲಘಟ್ಟ ತ್ಯಾಜ್ಯ ಸಂಸ್ಕರಣಾ ಘಟಕದಿಂದ ಕೋಲಾರ ಜಿಲ್ಲೆಯ 47 ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ಅಭಿವೃದ್ಧಿಪಡಿಸಲು ಪ್ರಾದೇಶಿಕ ಆಯುಕ್ತರ ಅದಾಲತ್‌ನಲ್ಲಿ ಕೇಳಿ ಬಂದ ಸಲಹೆ ಅನ್ವಯ 400 ಕೋಟಿ ರು.ಗಳ ಯೋಜನೆ ತಯಾರಿಸಲಾಗಿದ್ದು ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ಸಾಧಕ-ಬಾಧಕ ತಿಳಿಯಲು ಮಂಗಳವಾರ ಬೆಂಗಳೂರಿನಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಯೋಜನೆ ಸಮಗ್ರ ಮಾಹಿತಿಯನ್ನು ಮಂಡಿಸಿರೆನ್ನಲಾಗಿದೆ.
ತ್ಯಾಜ್ಯ ನೀರು ಕೆರೆಗಳಿಗೆ ಹರಿಸುವುದು ಮಾತ್ರವಲ್ಲದೆ ಕುಡಿಯುವುದಕ್ಕೂ ಬಳಸಬಹುದೇ ಎಂಬುದರ ಬಗ್ಗೆ ತಜ್ಞರಿಂದ ಮಾಹಿತಿ ಪಡೆಯುವಂತೆ ಸೂಚನೆ ನೀಡಿದ ಮುಖ್ಯ ಕಾರ್ಯದರ್ಶಿಗಳು ಯೋಜನೆ ಅನುಷ್ಠಾನದಿಂದ ಅನುಕೂಲವಾಗುತ್ತದೆ, ಯೋಜನೆ ಯೋಗ್ಯವಾಗಿದೆ ಎಂಬುದು ಖಾತರಿಯಾದ ಮೇಲೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವುದು ಸೇರಿದಂತೆ ಇನ್ನಿತರ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.
ಜೂ.19ರಂದು ನಡೆಯುವ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಪಂ,ತಾಪಂ ಅಧ್ಯಕ್ಷರು ಸೇರುವುದರಿಂದ ಅಲ್ಲಿ ಕೋರಮಂಗಲ-ಚಲಘಟ್ಟ ತ್ಯಾಜ್ಯ ಸಂಸ್ಕರಣಾ ಘಟಕದ ನೀರಿನ ಬಳಕೆ ವಿಚಾರವಾಗಿ ಚರ್ಚಿಸಿ, ಸಾಧ್ಯವಾದರೆ ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಸಿದ್ಧಪಡಿಸಿರುವ ಪವರ್ ಪಾಯಿಂಟ್ ಪ್ರಾನ್ಸೆಂಟೇಷನ್ ಮಾಡಿಸಿ ಎಲ್ಲರ ಅಭಿಪ್ರಾಯದ ನಂತರ ನಿರ್ಣಯವನ್ನು ಸರ್ಕಾರಕ್ಕೆ ಮಂಡಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಮುಖ್ಯ ಕಾರ್ಯದರ್ಶಿಗಳು ಕರೆದಿದ್ದ ಸಭೆಯಲ್ಲಿ ಡಿಸಿ ಡಿ.ಕೆ.ರವಿ, ಜಿಪಂ ಸಿಇಒ ವಿನೋತ್ ಪ್ರಿಯಾ, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪ, ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೋಲಾರ ಜಿಲ್ಲಾ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಗೊತ್ತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement