ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತೆರೆದ ಕೊಳವೆ ಬಾವಿಗಳ ಮುಚ್ಚೋದ್ಯಾವಾಗ?

Mainashree
Updated On : 18 Jun 2014, 11:46 am

 ಪಾ.ಶ್ರೀ.ಅನಂತರಾಮ್
ಕೋಲಾರ: ಕೊಳವೆ ಬಾವಿಗಳನ್ನು ಮುಚ್ಚದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ದೇಶದ ಅನೇಕ ಕಡೆ ಮಕ್ಕಳು ಆಕಸ್ಮಿಕವಾಗಿ ಜೀವ ಕಳೆದುಕೊಂಡಿರುವ ಹತ್ತಾರು ಉದಾಹರಣೆಗಳು ಇದ್ದರೂ ಕೋಲಾರ ನಗರಸಭೆ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.
ನಗರದ 13ನೇ ವಾರ್ಡ್‌ಗೆ ಸೇರಿದ ಪಿಸಿ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಿಂಭಾಗದಲ್ಲಿ ಕೆಲವು ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಸಲಾಗಿದ್ದು, ನೀರು ಸಿಗದೆ ವಿಫಲವಾಗಿತ್ತು. ಇದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ಅನೇಕ ಬಾರಿ ಜನಪ್ರತಿನಿಧಿಗಳ ಗಮನಕ್ಕೆ ಸಾರ್ವಜನಿಕರು ಹಾಗೂ ಮಾಧ್ಯಮಗಳು ಮನವರಿಕೆ ಮಾಡಿದ್ದರೂ ಕೊಳವೆ ಬಾವಿ ಮುಚ್ಚಿಸಿಲ್ಲ.
ತಾತ್ಕಾಲಿಕ ವ್ಯವಸ್ಥೆ: ಕಾಟಾಚಾರಕ್ಕೆ ಒಂದೆರಡು ಬಾರಿ ಕೊಳವೆ ಬಾವಿಗೆ ಪ್ಲೇಟ್ ಮುಚ್ಚಲಾಗಿತ್ತಾದರೂ ಸೂಕ್ತ ಭದ್ರತೆ ಇಲ್ಲದೆ ಈ ಪ್ಲೇಟ್‌ಗಳು ನಾಪತ್ತೆಯಾಗಿವೆ. ಅನೇಕ ಬಾರಿ ಸಾರ್ವಜನಿಕರು ಮಕ್ಕಳ ಹಿತದೃಷ್ಟಿಯಿಂದ ಚಪ್ಪಡಿ ಕಲ್ಲನ್ನು ತೆರೆದ ಕೊಳವೆ ಬಾವಿಗಳ ಮೇಲೆ ಇಟ್ಟಿದ್ದಾರೆ. ಆದರೆ, ಈ ತಾತ್ಕಾಲಿಕ ವ್ಯವಸ್ಥೆಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ.
ವಿಫಲ ಕೊಳವೆ ಬಾವಿಗಳನ್ನು ಮುಚ್ಚದಿರುವುದರಿಂದ ಪ್ರತಿನಿತ್ಯ ಸುತ್ತಮುತ್ತಲ ನಿವಾಸಿಗಳು ಕಸ ಕಡ್ಡಿಗಳನ್ನು ಸುರಿಯಲಾರಂಭಿಸಿದ್ದಾರೆ. ಪ್ರತಿನಿತ್ಯ ಹತ್ತಾರು ಹಸುಗಳು ಆಹಾರಕ್ಕಾಗಿ ಅಲ್ಲಿಗೆ ಬರುತ್ತವೆ, ಕೊಳವೆ ಬಾವಿಯ ಹಿಂಭಾಗದಲ್ಲೇ ಶಾಲೆ ಇದ್ದು, ಮಕ್ಕಳಿಗೂ ಇದರಿಂದ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಈ ಕೊಳವೆ ಬಾವಿಯನ್ನು ಶಾಶ್ವತವಾಗಿ ಮುಚ್ಚಿಸುವುದು ಸೂಕ್ತ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಆತಂಕದಲ್ಲಿ ಪೋಷಕರು: ಪಿಸಿ ಬಡಾವಣೆ ಮಾತ್ರವಲ್ಲದೆ ನಗರದ ಅನೇಕ ಕಡೆ ವಿಫಲ ಕೊಳವೆ ಬಾವಿಗಳನ್ನು ಮುಚ್ಚದಿರುವುದರಿಂದ ಜನತೆ, ಮಕ್ಕಳ ಪೋಷಕರು ಆತಂಕಪಡುವಂತಾಗಿದೆ. ರಾಜ್ಯದ ವಿವಿಧ ಕಡೆ ಕೊಳವೆ ಬಾವಿಗಳಲ್ಲಿ ಮಕ್ಕಳು ಬಿದ್ದು ದುರ್ಘಟನೆಗಳು ನಡೆದಾಗಲೆಲ್ಲ ಎಚ್ಚರಿಕೆ ನೀಡುತ್ತಿದ್ದರೂ ನಗರಸಭೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಟೀಕೆಗೆ ಗ್ರಾಸವಾಗಿದೆ.
ಶಾಶ್ವತ ಪರಿಹಾರ ಅಗತ್ಯ: ಭೂ ವಿಜ್ಞಾನ ಇಲಾಖೆ ಅಥವಾ ಖಾಸಗಿ ಕೊಳವೆ ಬಾವಿ ತಜ್ಞರಿಗೆ ಕೋಲಾರ ನಗರದಲ್ಲಿ ಎಲ್ಲೆಲ್ಲಿ ಕೊಳವೆ ಬಾವಿಗಳು ಇವೆ, ಅವುಗಳಲ್ಲಿ ವಿಫಲವಾದವುಗಳೆಷ್ಟು ಎಂಬ ಮಾಹಿತಿ ಇದ್ದೇ ಇರುತ್ತದೆ. ಜತೆಗೆ ಪ್ರತಿ ವಾರ್ಡ್ ಸದಸ್ಯರಿಗೂ ತಮ್ಮ ವಾರ್ಡ್‌ನಲ್ಲಿರುವ ಕೊಳವೆ ಬಾವಿಗಳ ಸ್ಥಿತಿಗತಿಯ ಮಾಹಿತಿ ಇರುವುದರಿಂದ ಕೂಡಲೆ ನಗರಸಭೆ ಅಧ್ಯಕ್ಷರು, ಆಯುಕ್ತರು ಜಂಟಿ ಸಮೀಕ್ಷೆ ಕೈಗೊಂಡು ವಿಫಲವಾಗಿರುವ ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸದಿದ್ದರೆ ಜೀವ ಹಾನಿಗೆ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement