ಲೋಕಾ ಬಲೆಗೆ ಸಿಕ್ಕಿಬಿದ್ದವರಿಗೆ ಶಿಕ್ಷೆಯಾಗಲಿ
ಕೋಲಾರ: ಲೋಕಾಯುಕ್ತರ ಬಲೆಗೆ ಸಿಕ್ಕಿಬೀಳುವ ಭ್ರಷ್ಟರಿಗೆ ಕಠಿಣ ಶಿಸ್ತು ಕ್ರಮ ಜಾರಿಯಾಗದ ಪರಿಣಾಮ ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಕೊಳ್ಳುವಂತಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆಯ ರಾಜ್ಯಾಧ್ಯಕ್ಷ, ವಕೀಲ ಕೆ. ನರೇಂದ್ರಬಾಬು ತಿಳಿಸಿದ್ದಾರೆ.
ಅವರು ಸಮಿತಿಯ ಸದಸ್ಯರ ನಿಯೋಗದೊಂದಿಗೆ ಅಪರ ಜಿಲ್ಲಾಧಿಕಾರಿ ನವೀನ್ಕುಮಾರ್ ರಾಜ್ ಅವರಿಗೆ ಮನವಿ ಸಲ್ಲಿಸಿ ನಗರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆ ಕಚೇರಿ ಅಧೀಕ್ಷಕ ಮುನಿರಾಜು ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ಕಳೆದ ಮೇ 23ರಂದು ದಾಳಿ ಮಾಡಿ ಅಕ್ರಮ ಆಸ್ತಿಯನ್ನು ಪತ್ತೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಹೆಚ್ಚುವರಿ ಆಯುಕ್ತರು ಸಾಕ್ಷಿಗಳು ನಾಶವಾಗದಿರಲಿ ಎಂಬ ಉದ್ದೇಶದಿಂದ ಮುನಿರಾಜ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಜೂ.6ರಂದು ಚಿತ್ರದುರ್ಗ ಜಿಲ್ಲೆಗೆ ವರ್ಗಾವಣೆ ಮಾಡಿದ್ದರೂ ಪ್ರಭಾವ ಬಳಸಿ ಮತ್ತೆ ಜಿಲ್ಲೆಯಲ್ಲೇ ಮುಂದುವರೆದಿದ್ದಾರೆಂದು ಆರೋಪಿಸಿದ್ದಾರೆ.
ಜಿಲ್ಲಾ ಶಸ್ತ್ರಚಕಿತ್ಸಕ ಡಾ. ರಮೇಶ್ ಬಾಬು ಅವರು ಆರೋಪ ಹೊತ್ತಿರುವ ಮುನಿರಾಜು ಸೇವೆ ಮುಂದುವರಿಕೆಗೆ ಕಾರಣರಾಗಿದ್ದಾರೆ. ಇದನ್ನು ವಿರೋಧಿಸಿರುವ ಆಸ್ಪತ್ರೆ ಸಿಬ್ಬಂದಿಗೆ ಬೆದರಿಕೆ ಹಾಕಲಾಗುತ್ತಿದೆ. ಲೋಕಾಯುಕ್ತರ ಬಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಕಿಂಚಿತ್ತೂ ಭಯವಿಲ್ಲದಂತಾಗಿದೆ. ಜಿಲ್ಲಾ ಆಡಳಿತ ಕೂಡಲೇ ಮಧ್ಯ ಪ್ರವೇಶಿಸಿ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.