ಟ್ಯಾಂಕರ್ ಮೂಲಕ ನೀರು ಪೂರೈಕೆ
ಕನ್ನಡಪ್ರಭ ವಾರ್ತೆ, ಕೋಲಾರ, ಜೂ.18
ತಾಲೂಕಿನಲ್ಲಿ ಮಳೆ ಕೊರತೆಯಿಂದ ನೀರಿಗೆ ತೊಂದರೆಯಾಗಿದೆ. ಮಳೆ ಬಾರದಿದ್ದರೆ ಟ್ಯಾಂಕರ್‌ಗಳ ಮೂಲಕ ಅಗತ್ಯ ಇರುವ ಕಡೆ ನೀರು ಸರಬರಾಜು ಮಾಡಲಾಗುತ್ತದೆ ಎಂದು ಜಿಪಂ ಎಂಜಿನಿಯರಿಂಗ್ ವಿಭಾಗದ ಎಇಇ ಮಂಜುನಾಥ್ ಹೇಳಿದ್ದಾರೆ.
ನಗರದ ತಾಪಂ ಸಭಾಂಗಣದಲ್ಲಿ ಬುಧವಾರ ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾರಾಯಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲೂಕಿನಲ್ಲಿ ಕುಡಿಯುವ ನೀರು, ಬರಗಾಲ ಕುರಿತು ಅವರು ಮಾಹಿತಿ ನೀಡಿದರು.
ಮಳೆ ಬಂದ ಮೇಲೆ ಕೊಳವೆ ಬಾವಿ: ಪ್ರಸಕ್ತ ಕೊರೆಸಿದ 300 ಕೊಳವೆ ಬಾವಿಗಳ ಪೈಕಿ 112 ವಿಫಲವಾಗಿವೆ. ಕನಿಷ್ಠ ಎರಡು ಸಾಧಾರಣ ಮಳೆಯಾದರೆ ಅಂತರ್ಜಲ ಸ್ವಲ್ಪಮಟ್ಟಿಗೆ ಹೆಚ್ಚಳವಾಗುವುದರಿಂದ ಆಗ ಕೊಳವೆ ಬಾವಿ ಕೊರೆಸಬಹುದು ಎಂದು ಮಂಜುನಾಥ್ ತಿಳಿಸಿದರು.
ಪಿಡಿಒ ವಿರುದ್ಧ ತನಿಖೆ ನಡೆಸಿ: ಮಾರ್ಜೇನಹಳ್ಳಿ ಗ್ರಾ.ಪಂ.ನಲ್ಲಿ ಯಾವುದೇ ವಿಚಾರ ಕೇಳಿದರೂ ದಾಖಲೆಗಳೇ ಇಲ್ಲ. ಡಿಮ್ಯಾಂಡ್ ರಿಜಿಸ್ಟರ್ ಇಲ್ಲ. ಗ್ರಾ.ಪಂ.ಗೆ ಬಂದ ಅನುದಾನವನ್ನು ಕಬಳಿಸಿದ್ದಾರೆ. ಪಿಡಿಒಗಳ ಮೇಲೆ ತನಿಖೆ ನಡೆಸಿ ಎಂದು ಸದಸ್ಯ ರಾಮಚಂದ್ರಗೌಡ ಹಾಗೂ ಆನಂದ್ ಒತ್ತಾಯಿಸಿದರು. ಜೂ.19ರಂದು ಗ್ರಾಪಂ ಸಭೆ ಇರುವುದರಿಂದ ಅಧಿಕಾರಿಗಳು ಭಾಗವಹಿಸಿ ಸೂಕ್ತ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸದಸ್ಯರೆದುರೇ ಫಲಾನುಭವಿಗಳ ಆಯ್ಕೆ: ಪಶುಪಾಲನಾ ಇಲಾಖೆಯಲ್ಲಿ ಸೌಲಭ್ಯ ಪಡೆದುಕೊಂಡವರೇ 2-3 ಬಾರಿ ಪಡೆದಿದ್ದಾರೆ. ಹಿಂದಿನ ಸಾಲಿನ ಪಟ್ಟಿ ನೀಡುವಂತೆ ಸದಸ್ಯೆ ರಮಾದೇವಿ ಆಗ್ರಹಿಸಿದರು. ಯಾರನ್ನು ಕೇಳಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿದ್ದೀರಿ ಎಂದು ಸದಸ್ಯೆ ಪುಟ್ಟಮ್ಮ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿದ ತಾಪಂ ಕಾರ್ಯ ನಿರ್ವಹಣಾಧಿಕಾರಿ, ಫಲಾನುಭವಿಗಳ ಪಟ್ಟಿಯನ್ನು ಸದಸ್ಯರಿಗೆ ನೀಡುವಂತೆ ಪಶುಪಾಲನಾ ಇಲಾಖೆ ಅಧಿಕಾರಿಗೆ ಸೂಚಿಸಿದರಲ್ಲದೆ, ಈ ಸಾಲಿನಲ್ಲಿ ಸದಸ್ಯರ ಸಮ್ಮುಖದಲ್ಲೇ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು. ತಾಪಂ ಉಪಾಧ್ಯಕ್ಷೆ ಸರಸ್ವತಿ, ಇಒ ಜಾನಕಿರಾಮ್ ಇದ್ದರು.