ನೀರು ಸಂಸ್ಕರಣೆ ನಿರ್ಣಯ ಕೈಗೊಳ್ಳಿ
ಕೋಲಾರ: ಬೆಂಗಳೂರಿನ ಕೋರಮಂಗಲ-ಚಲಘಟ್ಟ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಕೋಲಾರ ಜಿಲ್ಲೆಗೆ ನೀರು ಪೂರೈಕೆ ಮಾಡುವ ಯೋಜನೆಗೆ ಸಂಬಂಧಿಸಿದಂತೆ ಇನ್ನು 10 ದಿನಗಳಲ್ಲಿ ಗ್ರಾಪಂ, ತಾಪಂ, ಹಾಗೂ ಜಿಪಂ ವಿಶೇಷ ಸಾಮಾನ್ಯ ಸಭೆ ನಡೆಸಿ, ತ್ಯಾಜ್ಯ ಸಂಸ್ಕರಣೆಯ ನೀರನ್ನು ಕೆರೆಗಳಿಗೆ ಹರಿಸುವುದು ಸೂಕ್ತವೇ? ಕೊಳವೆಗಳ ಮೂಲಕ ಕುಡಿಯಲು ನೀರು ಸರಬರಾಜು ಮಾಡುವುದು ಸರಿಯೇ? ಎಂಬುದರ ಬಗ್ಗೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಿ.ಕೆ.ರವಿ ನೀರಿನ ಯೋಜನೆಯನ್ನು ಪ್ರಸ್ತಾಪಿಸಿದರು. ಈ ಯೋಜನೆಯ ಬಗ್ಗೆ ಸ್ಥಳೀಯ ಸಂಸ್ಥೆಗಳಲ್ಲಿ ಚರ್ಚಿಸಿ ಕೆರೆಗಳಿಗೆ ನೀರು ಸರಿಸಬೇಕೇ? ಇಲ್ಲವೇ ಕುಡಿಯಲು ಪೈಪ್ ಲೈನ್ ಮೂಲಕ ನೀರು ಹರಿಸುವುದು ಸೂಕ್ತವೇ? ಎಂಬುದನ್ನು ಜನಪ್ರತಿನಿಧಿಗಳು ಚರ್ಚಿಸಿ, ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ತಿಳಿಸಿದರು.
ಕೋರಮಂಗಲ-ಚಲಘಟ್ಟ ಘಟಕದಿಂದ 250 ಎಂಎಲ್ಡಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ ಹೆಚ್ಚುವರಿಯಾಗಿ 60 ಎಂಎಲ್ಡಿ ನೀರು ಘಟಕ ಸೇರುತ್ತಿದೆ. ಈ ನೀರನ್ನು ಬರ ಪೀಡಿತ ಕೋಲಾರ ಜಿಲ್ಲೆಗೆ ಒದಗಿಸಿದರೆ ನೀರಿನ ಸಮಸ್ಯೆ ಕೊಂಚಮಟ್ಟಿಗಾದರೂ ನಿವಾರಣೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಎತ್ತಿನಹೊಳೆ ಯೋಜನೆಗೆ 12500 ಕೋಟಿ ಬೇಕಾಗುತ್ತದೆ. ಕೋರಮಂಗಲ-ಚಲಘಟ್ಟ ಘಟಕದಿಂದ ಕೋಲಾರ, ಮಾಲೂರು, ಮುಳಬಾಗಲು ಹಾಗೂ ಬಂಗಾರಪೇಟೆ ತಾಲೂಕಿನ ಕೆರೆಗಳಿಗೆ ಹರಿಸಿ ಅಂತರ್ಜಲ ಹೆಚ್ಚಿಸಲು ಕೇವಲ 450 ರಿಂದ 500 ಕೋಟಿ ಖರ್ಚಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು, ಸುಲಭವಾಗಿ ನೀರು ಒದಗಿಸಬಹುದಾದ ಯೋಜನೆಯ ಬಗ್ಗೆ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಣೆ ಅಗತ್ಯ. ಸಂಸ್ಕರಿಸಿದ ತ್ಯಾಜ್ಯ ನೀರು ಕೆರೆಗಳಿಗೆ ಹರಿಸಬೇಕೇ? ಇಲ್ಲವೇ ಕುಡಿಯಲು ಉಪಯೋಗಿಸಬಹುದೇ ಎಂಬುದರ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ಇನ್ನು 10 ದಿನಗಳಲ್ಲಿ ನಿರ್ಣಯ ಮಾಡಿ ಕಳುಹಿಸಿ. ನಾನು ಆಸಕ್ತಿ ವಹಿಸಿ ಯೋಜನೆಗೆ ಮಂಜೂರಾತಿ ಪಡೆಯಲು ಪ್ರಾಮಾಣಿಕವಾಗಿ ಯತ್ನಿಸುತ್ತೇನೆ ಎಂದರು.
ಶಾಸಕ ಕೊತ್ತನೂರು ಮಂಜುನಾಥ್, ಪ್ರಭಾರ ಜಿಪಂ ಅಧ್ಯಕ್ಷ ನಾಗರಾಜ್, ಜಿಪಂ ಸಿಇಒ ವಿನೋತ್ ಪ್ರಿಯಾ, ಕೆಡಿಪಿ ಸದಸ್ಯರಾದ ಸುಕನ್ಯ, ಸಿಮೋಲ್ ಮೋಹನ್, ಎಂ.ಎಸ್.ಆನಂದ್ ಅವರು ನೀರಿನ ಯೋಜನೆಗೆ ಸಹಮತ ವ್ಯಕ್ತಪಡಿಸಿ, ಪಂಚಾಯಿತಿಗಳಲ್ಲಿ ನಿರ್ಣಯವಾಗುವುದಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.