ಪ್ರಗತಿಗೆ ಸಿಬ್ಬಂದಿ ಕೊರತೆಯೇ ಅಡ್ಡಿ
ಕ.ಪ್ರ.ವಾರ್ತೆ ಟಿ ಚಿಕ್ಕಬಳ್ಳಾಪುರ ಟಿ ಜೂ.19
: ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್ ಅವರಿಗೆ ಜಿಲ್ಲೆಯಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಅನೇಕ ಹುದ್ದೆಗಳು ಇದುವರೆಗೂ ಭರ್ತಿಯಾಗದೇ ಖಾಲಿ ಇರುವುದರ ಬಗ್ಗೆ ಅಧಿಕಾರಿಗಳು ಗಮನ ಸೆಳೆದರು. ಪ್ರಗತಿಯನ್ನು ಸಾಧಿಸಲು ತೊಡಕು ಮತ್ತು ಕರ್ತವ್ಯ ನಿರ್ವಹಣೆಗೆ ಒತ್ತಡ ಹೆಚ್ಚಾಗಿದೆ ಎಂದು ಅಳಲು ತೋಡಿಕೊಂಡರು.
ಅಬಕಾರಿ ಇಲಾಖೆ, ಆರೋಗ್ಯ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಅರ್ಧದಷ್ಟು ಖಾಲಿ ಇದೆ ಎಂದು ಅಂಕಿ ಅಂಶಗಳ ಸಮೇತ ಸಚಿವರ ಮುಂದಿಟ್ಟರು.
ಸಮಸ್ಯೆ ಪ್ರಸ್ತಾಪ: ಜಿ.ಪಂ. ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸರ್ಕಾರದಿಂದ ಅನುದಾನ ಬರುತ್ತಿದೆ. ಆದರೂ ಪ್ರಗತಿಯನ್ನು ಸಾಧಿಸಲು ಅಡ್ಡಿ ಏನು ಎಂದು ಪ್ರಶ್ನಿಸಿ ಸಮಸ್ಯೆಗಳನ್ನು ಕೇಳಿದಾಗ ಖಾಲಿ ಇರುವ ಹುದ್ದೆಗಳ ಸಮಸ್ಯೆ ಪ್ರಸ್ತಾಪವಾಯಿತು.
ಆಸ್ಪತ್ರೆಲೂ ಹುದ್ದೆ ಖಾಲಿ: ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 119 ಹುದ್ದೆಗಳಿಗೆ 53 ಹುದ್ದೆಗಳು ಖಾಲಿ ಇವೆ. 29 ಶುಶ್ರೂಷಕಿಯರಿಗೆ ಇರುವುದು 13, ಇನ್ನೂ ವೈದ್ಯರು ಮತ್ತು ಡಿ ಗ್ರೂಪ್ ನೌಕರರ ನೇಮಕಾತಿಯಾಗಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕಿ ಮಂಜುಳಾ ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಂಗಸ್ವಾಮಿ, 100 ಕ್ಕೂ ಹೆಚ್ಚು ಆರೋಗ್ಯ ಹಿರಿಯ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ ಎಂದರು. ಜಿಲ್ಲೆಯಲ್ಲಿ 60 ಹಾಸ್ಟೆಲ್‌ಗಳಿದ್ದು 17 ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳಿಲ್ಲ. ಜೊತೆಗೆ ತಾಲೂಕಿನಲ್ಲಿ 5 ಮಂದಿ ವಿಸ್ತರಣಾಧಿಕಾರಿಗಳು ಹುದ್ದೆ ಖಾಲಿ ಇವೆ ಎಂದು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಬಾಗೇಪಲ್ಲಿಯಲ್ಲಿ 10 ಹಾಸ್ಟೆಲ್‌ಗಳಿಗೆ 4 ಕಡೆ ವಾರ್ಡನ್‌ಗಳೇ ಇಲ್ಲ. ಇನ್ನು ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕಿನ ಅನೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ.
ಈಗಾಗಲೇ ಶಿಕ್ಷಕರು ಬಾರದ ಕಾರಣ ಗ್ರಾಮಸ್ಥರು ಶಾಲೆಯನ್ನು ಮುಚ್ಚಿಸುತ್ತಿದ್ದು, ಇನ್ನೂ ಶಿಕ್ಷಕರ ನಿಯೋಜನೆ ಮಾಡದಿದ್ದರೆ ತಾಲೂಕಿನಲ್ಲಿನ ಶಾಲೆಗಳನ್ನು ಮುಚ್ಚಿಸಿ ಬಿಡುತ್ತೇವೆ. ನೀವು ಆರಾಮಾಗಿ ಇರಿ ಎಂದು ವ್ಯಂಗ್ಯವಾಡಿದರು.
ಕನಿಷ್ಠ ಸಿಬ್ಬಂದಿ: ಅಬಕಾರಿ ಇಲಾಖೆಯ ಉಪ ಆಯುಕ್ತ ಶ್ರೀನಿವಾಸಯ್ಯ ಮಾತನಾಡಿ, ತಮ್ಮ ಇಲಾಖೆಗೆ 115 ಹುದ್ದೆಗಳು ಮಂಜೂರಾಗಿವೆ.
ಕೇವಲ 48 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು 67 ಹುದ್ದೆಗಳು ಖಾಲಿ ಇವೆ. 4 ಅಬಕಾರಿ ಉಪ ನಿರೀಕ್ಷಕರು, 7 ಅಬಕಾರಿ ಹಿರಿಯ ರಕ್ಷಕರು ಮತ್ತು 34 ಅಬಕಾರಿ ನಿರೀಕ್ಷಕರು, 5 ದ್ವಿತೀಯ ದರ್ಜೆ ಸಹಾಯಕರು, 9 ವಾಹನ ಚಾಲಕರ ಹುದ್ದೆ ಖಾಲಿ ಎಂದರು.ಹೀಗೆ ಒಂದೊಂದು ಇಲಾಖೆ ಖಾಲಿ ಹುದ್ದೆಗಳ ಲೆಕ್ಕ ಕೊಡಲು ಮುಂದಾಗುತ್ತಿದ್ದರಿಂದ ದಂಗಾದ ಸಚಿವರು ಕೂಡಲೇ ಮುಖ್ಯಮಂತ್ರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಉಪಾಧ್ಯಕ್ಷೆ ವೀಣಾ ಗಂಗುಲಪ್ಪ, ಸಿಇಒ ನೀಲಾ ಮಂಜುನಾಥ್, ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಉಪಸ್ಥಿತರಿದ್ದರು.