ರೇಷ್ಮೆ ಇಲಾಖೆ ವಿಲೀನ ದುರದೃಷ್ಟಕರ
ಚಿಕ್ಕಬಳ್ಳಾಪುರ: ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿ ಸಮಿತಿ ರಚಿಸಿರುವುದು ದುರದೃಷ್ಟಕರ ಎಂದು ಸಿಪಿಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ವಿಷಾದ ವ್ಯಕ್ತಪಡಿಸಿದರು.
ನಗರದ ವಾಪಸಂದ್ರದಲ್ಲಿರುವ ಸಿಪಿಎಂ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ, ರೇಷ್ಮೆ ಇಲಾಖೆ ಶತಮಾನ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವ ಯೋಚನೆ ಮಾಡಬಾರದಾಗಿತ್ತು. ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದರು.
ನಿರ್ಧಾರ ಸರಿಯಲ್ಲ: ರಾಜ್ಯದಲ್ಲಿ ರೇಷ್ಮೆ ಕೃಷಿಯನ್ನು ಅವಲಂಭಿಸಿ ಲಕ್ಷಾಂತರ ಕುಂಟುಂಬಗಳು ಜೀವನ ಸಾಗಿಸುತ್ತಿವೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶೇ. 50ಕ್ಕೂ ಹೆಚ್ಚು ಮಂದಿ ರೈತರು ರೇಷ್ಮೆ ಕೃಷಿಯನ್ನು ಅವಲಂಬಿಸಿದ್ದು. ರೇಷ್ಮೆ ಇಲಾಖೆಯಲ್ಲಿನ ನೌಕರರ ಹಾಗೂ ಇಲಾಖೆಯಲ್ಲಿನ ಬಲಹೀನತೆ ಎಂಬ ಕಾರಣ ನೀಡಿ ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವ ಸರ್ಕಾರದ ನಿರ್ಧಾರ ಸರಿಯಲ್ಲ ಎಂದರು.
ಸರ್ಕಾರಿ ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ಇಲಾಖೆಯ ವಿಲೀನಕ್ಕೆ ಮುಂದಾಗಿದೆ. ಕೃಷಿ ಇಲಾಖೆಯಲ್ಲಿನ ಸಾಮರ್ಥ್ಯಕ್ಕೆ ತಕ್ಕಂತೆ ನೌಕರರಿಲ್ಲ. ಆದರೇ ಕೃಷಿಯೊಂದಿಗೆ ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸಲು ಮುಂದಾಗಿರುವುದು ರೇಷ್ಮೇ ಕೃಷಿಯನ್ನು ವಿನಾಶದತ್ತ ತಳ್ಳುವ ಸಂಚು ಎಂದು ಕಿಡಿಕಾರಿದರು.
ಕುತಂತ್ರ: ಇಲಾಖೆಯ ಅಧಿಕಾರಿಗಳ ಕುತಂತ್ರಕ್ಕೆ ತಲೆಬಾಗುತ್ತಿರುವ ಜನಪ್ರತಿನಿಧಿಗಳು ರೇಷ್ಮೆ ಕೃಷಿ ಹಾಗೂ ಲಕ್ಷಾಂತರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸುತ್ತಿವೆ ಎಂದು ಆರೋಪಿಸಿದರು.
ಕುಡಿವ ನೀರಿಗೆ ಹಾಹಾಕಾರ ಉಂಟಾಗಿದೆ. ಮಹಿಳೆ, ಮಕ್ಕಳ ದೌರ್ಜನ್ಯ, ಅತ್ಯಾಚಾರದಂತ ಸೇರಿದಂತೆ ಪ್ರಮುಖವಾಗಿ ಕಾಡುತ್ತಿರುವ ಕಸ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಿಪಿಎಂ ಮುಖಂಡರಾದ ಬಿ.ಎನ್. ಮುನಿಕೃಷ್ಣಪ್ಪ, ಮಳ್ಳೂರು ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.