ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕರಡಿ ದಾಳಿಗೆ ವ್ಯಕ್ತಿ ಬಲಿ, ಇಬ್ಬರಿಗೆ ಗಾಯ

Vishwanath S
Updated On : 21 Jun 2014, 12:19 pm

ಗೌರಿಬಿದನೂರು: ತೋಟ ಕಾಯುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿನಡೆಸಿದ ಪರಿಣಾಮ ಕಾವಲುಗಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ನಗರಗೆರೆ ಹೋಬಳಿ ಮಲ್ಲೇನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಮೃತ ನಾರಾಯಣಸ್ವಾಮಿ(65) ಮಲ್ಲೇನಹಳ್ಳಿ ಕ್ರಾಸ್ ಬಳಿ ಇರುವ ಅಶ್ವತ್ಥರೆಡ್ಡಿ ಎಂಬುವರ ಸಪೋಟ ತೋಟದಲ್ಲಿ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ, ಹಸುಮೇಯಿಸಲು ಮಧ್ಯಾಹ್ನ ತೆರಳುತ್ತಿದ್ದಾಗ ಸಪೋಟ ಹಣ್ಣಿಗಾಗಿ ರಾತ್ರಿಯೇ ಬಂದು ಕುಳಿತಿದ್ದ ಕರಡಿ ನಾರಾಯಣಸ್ವಾಮಿ ಮೇಲೆರಗಿ ಕಚ್ಚಿ ಸಾಯಿಸಿ ನಂತರ ಪೊದೆಯಲ್ಲಿ ಅವಿತಿದೆ. ಈ ಸುದ್ದಿಯನ್ನು ತಿಳಿದ ಗುಂಡ್ಲಕೊತ್ತೂರು, ಮಲ್ಲೇನಹಳ್ಲಿ ಗ್ರಾಮಸ್ಥರು ದೊಣ್ಣೆ ಬಂದೂಕುಗಳೊಂದಿಗೆ ಆಗಮಿಸಿ ಪೊದೆಯಲ್ಲಿ ಅವತಿದ್ದ ಕರಡಿಯನ್ನು ಓಡಿಸಲು ಯತ್ನಿಸಿದಾಗ ಪಿಳ್ಳಗಂಗರೆಡ್ಡಿ ಮತ್ತು ಅಶ್ವತ್ಥಪ್ಪ ಎಂಬುವರ ಮೇಲೆಯೂ ಎರಗಿ ಗಾಯಗೊಳಿಸಿದೆ.
ಮೃತನಿಗೆ ಪರಿಹಾರ: ಮೃತ ನಾರಾಯಣಸ್ವಾಮಿ ಕುಟುಂಬಕ್ಕೆ  ಸರ್ಕಾರದಿಂದ ಸೂಕ್ತ ನೆರವು ನೀಡಲಾಗುವುದು, ಅರಣ್ಯ ಇಲಾಖೆಯಿಂದಲೂ 5 ಲಕ್ಷದ ವೆರೆಗೆ ಪರಿಹಾರಸಿಗಲಿದೆ ಎಂದು ಜಿಪಂ ಅಧ್ಯಕ್ಷ ಕೇಶವರೆಡ್ಡಿ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಇಂತಹ ಘಟನೆ ಸಂಭವಿಸಿದ್ದು ಇನ್ನು ಮುಂದೆ ಮುನ್ನಚ್ಚರಿಕೆ ವಹಿಸಿ ಸೂಕ್ತ ಅರಣ್ಯ ಸಿಬ್ಬಂದಿಯನ್ನು ನೇಮಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗುವುದು ಎಂದು ತಿಳಿಸಿ ಅಂತ್ಯಸಂಸ್ಕಾರಕ್ಕೆ ರು. 5,000 ನೀಡಿ ಪಂಚಾಯ್ತಿ ವತಿಯಿಂದ ಮನೆ ನಿರ್ಮಿಸಿಕೊಡಲಾಗುವುದು ಎಂದರು.
ಅರಣ್ಯ ಇಲಾಖೆಯಿಂದ ರು. 5ಲಕ್ಷ ಪರಿಹಾರ ಸಿಗಲಿದೆ ಎಂದು ವಲಯ ಅರಣ್ಯಾಧಿಕಾರಿ ನಾಗರಾಜ್ ತಿಳಿಸಿದ್ದು ಮುಂದಿನ ದಿನಗಳಲ್ಲಿ ಸೂಕ್ತ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದರು. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಸ್ಥಳಕ್ಕೆ ಸಿಪಿಐ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಗೋಪೀನಾಥ್, ಜಿಲ್ಲಾ ಅರಣ್ಯಾಧಿಕಾರಿ ದೇವರಾಜ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಂತಪ್ಪ ಆಗಮಿಸಿ ಪರಿಶೀಲನೆ ನಡೆಸಿದರು.
ರಕ್ಷಣೆಗೆ ಆಗ್ರಹ: ಕರಡಿ ದಾಳಿಯಿಂದ ಕಂಗಾಲಾಗಿರುವ ಮಲ್ಲೇನಹಳ್ಳಿ ಗುಂಡ್ಲಕೊತ್ತೂರು, ನಗರಗೆರೆ, ವಾಟದಹೊಸಹಳ್ಳಿ ಗ್ರಾಮಗಳ ಜನರು ಒಂಟಿಯಾಗಿ ಓಡಾಡಲು ಭೀತರಾಗಿದ್ದು ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement