ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಲಾರದಲ್ಲಿ ಕಸರತ್ತು!

Vishwanath S
Updated On : 21 Jun 2014, 12:19 pm

ಕೋಲಾರ: ಕಸ ವಿಲೇವಾರಿ ಸಮಸ್ಯೆಯಿಂದಾಗಿ ಕೋಲಾರ ನಗರ ದೊಡ್ಡ ಹಳ್ಳಿಯಂತೆಯಾಗಿದೆ!
ಬೆಂಗಳೂರಿನಂತೆಯೇ ಕೋಲಾರದಲ್ಲೂ ಕಸ ವಿಲೇವಾರಿ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಹತ್ತು ವರ್ಷಗಳಿಗೆ ಹೋಲಿಕೆ ಮಾಡಿದರೆ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ಜನಸಂಖ್ಯೆಯ ಸ್ಫೋಟ, ಅತಿಯಾಗಿ ಪ್ಲಾಸ್ಟಿಕ್ ಬಳಕೆ, ಘನತ್ಯಾಜ್ಯ ಅಸಮರ್ಪಕ ನಿರ್ವಹಣೆ, ಜಾಗದ ಕೊರತೆಯೇ ಕಾರಣ.
ನಗರಸಭೆ ವ್ಯಾಪ್ತಿಯ 35 ವಾರ್ಡುಗಳಲ್ಲಿ ಪ್ರತಿನಿತ್ಯ 60ರಿಂದ 70 ಹಬ್ಬ ಹರಿದಿನಗಳಲ್ಲಿ 75 ರಿಂದ 80 ಟನ್ ಕಸ ಸಂಗ್ರಹವಾಗುತ್ತದೆ. ಇದನ್ನು ಸೂಕ್ತ ಸ್ಥಳದಲ್ಲಿ ಸುರಿದು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಕೋಲಾರದಲ್ಲಿ ಶೇಖರಣೆ ಆಗುವ ಕಸ ವಿಲೇವಾರಿಗಾಗಿ ಕನಿಷ್ಠ 25 ಎಕರೆ ಭೂಮಿ ಬೇಕಾಗಿದೆ. ನಗರಸಭೆ ಬಳಿ ಭೂಮಿ ಖರೀದಿಗಾಗಿ 1 ಕೋಟಿ ಮೀಸಲಿಡಲಾಗಿದೆ. ಆದರೆ ಸರ್ಕಾರ ಪ್ರತಿ ಎಕರೆ ಜಮೀನಿಗೆ 3 ಲಕ್ಷ ನಿಗದಿ ಮಾಡಿದ್ದು ಈ ಬೆಲೆಗೆ ಭೂ ಮಾಲೀಕರು ಯಾರು ತಮ್ಮ ಭೂಮಿಯನ್ನು ಮಾರಾಟ ಮಾಡಲು ಇಷ್ಟಪಡುತ್ತಿಲ್ಲ.
ಖಾಸಗಿಯವರಿಂದ ಭೂಮಿ ಖರೀದಿಸಬೇಕಾದರೆ ಎಕರೆಗೆ ಕನಿಷ್ಠ ರು. 20 ಲಕ್ಷ ಬೇಡಿಕೆ ಇದೆ. ಹೀಗಾಗಿ ಕೋಲಾರದ ಕಸದ ಸಮಸ್ಯೆ ಕಗ್ಗಂಟಾಗಿದೆ. ನಗರಸಭೆ ನೇರವಾಗಿ ಭೂಮಿಯನ್ನು ಖರೀದಿಸಲು ಸರ್ಕಾರ ಅವಕಾಶ ನೀಡಿಲ್ಲ. ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೂ ಸ್ವಾಧೀನದ ಅಧಿಕಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಗೆ ನೀಡವಾಗಿದೆ. ಈ ಸಮಿತಿಯಲ್ಲಿ ಕೋಲಾರ ಕ್ಷೇತ್ರದ ಶಾಸಕರು ಸದಸ್ಯರಾಗಿದ್ದು ಮಾರುಕಟ್ಟೆ ಬೆಲೆ ಮತ್ತು ಸರ್ಕಾರಿ ಬೆಲೆಗೆ ಇರುವ ವ್ಯತ್ಯಾಸ, ಸಮಸ್ಯೆ ನಿವಾರಣೆಗಾಗಿ ಸಮಿತಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಭೂಮಿ ಬೆಲೆ ಕುರಿತು ಸೂಕ್ತವಾದ ನಿರ್ಧಾರ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹೆಚ್ಚಿನ ಪರಿಹಾರ ಕಲ್ಪಿಸಲು ಮುಂದಾಗದಿದ್ದರೆ ಕೋಲಾರ ಕಸದ ಸಮಸ್ಯೆ ಬಗೆಹರಿಯುವುದು ಕಷ್ಟವಾಗುತ್ತದೆ.
ಭೂ ಖರೀದಿ ಮುಂಚೆ ಸಿದ್ಧತೆ
ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೂಮಿ ಗುರುತಿಸುವ ಕಾರ್ಯ ಮುಂದುವರೆದಿದ್ದು ನಗರಸಭೆ ಅಧ್ಯಕ್ಷ ಮುಬಾಕರ್ ಹಾಗೂ ಜಿಲ್ಲಾಧಿಕಾರಿ ಡಿ.ಕೆ. ರವಿ ಜಂಟಿಯಾಗಿ ಶೋಧನೆ ಆರಂಭಿಸಿದ್ದಾರೆ. ಬೇಗನೆ ಭೂಮಿ ಸಮಸ್ಯೆ ನಿವಾರಿಸಿ ಎಂದು ಕ್ಷೇತ್ರದ ಶಾಸಕ ವರ್ತೂರ್ ಪ್ರಕಾಶ್ ಅವರಲ್ಲೂ ಮನವಿ ಮಾಡಲಾಗಿದೆ.
ಸಿಬ್ಬಂದಿ ಕೊರತೆ
ನಗರದ ಜನಸಂಖ್ಯೆ ಈಗ 1.50 ಲಕ್ಷ ದಾಟಿದೆ. ಪ್ರತಿನಿತ್ಯ 60ರಿಂದ 70 ಟನ್ ಕಸ ಸಂಗ್ರಹಣೆಯಾಗುತ್ತಿದೆ. ಉಸ್ತುವಾರಿ ನೋಡಿಕೊಳ್ಳಲು ಕನಿಷ್ಠ 5 ಮಂದಿ ಹೆಲ್ತ್ ಇನ್ಸ್‌ಪೆಕ್ಟರ್‌ಗಳು ಬೇಕು. ಪ್ರಸ್ತುತ ಒಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರ ಹುದ್ದೆ 214 ಮಂಜೂರು ಆಗಿದ್ದರೂ 115 ಮಂದಿ ಮಾತ್ರವಿದ್ದಾರೆ. ಹೊರ ಗುತ್ತಿಗೆಯಡಿ 82 ಜನರನ್ನು ತೆಗೆದುಕೊಳ್ಳಲಾಗಿದೆ. ಕೆಲವು ಪೌರ ಕಾರ್ಮಿಕರನ್ನು ಪಾರ್ಕ್‌ಗಳ ನಿರ್ವಹಣೆ ಇನ್ನಿತರ ಕಾರ್ಯಗಳಿಗೆ ನಿಯೋಜನೆ ಮಾಡಲಾಗಿದೆ. 24 ಮಂದಿ ಲೋಡರ್‌ಗಳು ಇದ್ದಾರೆ. ಇನ್ನು 10-15 ದಿನದೊಳಗೆ ಜಾಗ ಪತ್ತೆ ಮಾಡಿ ಕಸದ ಸಮಸ್ಯೆಗೆ ಇತಿಶ್ರೀ ಹಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಅಧ್ಯಕ್ಷ ಮುಬಾಕರ್ ಭರವಸೆ ನೀಡಿದ್ದಾರೆ.
ವಿಫಲ ಯತ್ನಗಳು
-  ಕೋಲಾರ ತಾಲೂಕಿನ ವರದೇನಹಳ್ಳಿ-ಮಿಟ್ಟಕಲ್ಲಳ್ಳಿಯ ಬಳಿ 25 ಎಕರೆ ಖಾಸಗಿ ಭೂಮಿ ಖರೀದಿಸಲು ಉದ್ದೇಶಸಲಾಗಿತ್ತು. ಆದರೆ ಜಿಲ್ಲಾಡಳಿತ ನಿಗದಿ ಮಾಡಿದ ಬೆಲೆಗೆ ಭೂಮಿ ನೀಡಲು ಮಾಲೀಕರು ನಿರಾಕರಿಸಿದ್ದರಿಂದ ಯೋಜನೆ ಕೈತಪ್ಪಿತು.
-  ಪವರ್ ಗ್ರಿಡ್ ಬಳಿ ಭೂಮಿ ಖರೀದಿಗೆ ಪ್ರಯತ್ನ ನಡೆದಿತ್ತು. ವಿವಾದ ಉಂಟಾದ್ದರಿಂದ ತಾಲೂಕಿನ ಆರಾಭೀಕೊತ್ತನೂರು ಬಳಿ ಜಾಗ ಗುರುತಿಸಿ ತ್ಯಾಜ್ಯ ಘಟಕ ಆರಂಭಕ್ಕೆ ಸಿದ್ಧತೆ ನಡೆದಿತ್ತು.
-  ಯಡಹಳ್ಳಿಯಲ್ಲಿ ಕಸ ವಿಲೇವಾರಿಗಾಗಿ ಜಾಗ ನೋಡಿದ್ದರೂ ಗ್ರಾಮಸ್ಥರು ಪ್ರತಿಭಟಿಸಿದ್ದರಿಂದ ಘಟಕ ಸ್ಥಾಪನೆ ಪ್ರಸ್ತಾವನೆ ಕೈಬಿಟ್ಟು ಹೊಸ ಜಾಗಕ್ಕೆ ಶೋಧನೆಯನ್ನು ಕೈಗೊಳ್ಳಲಾಗಿದೆ.


-ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement