ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ: ಆರೋಪ
ಗೌರಿಬಿದನೂರು: ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮದ ಸರ್ವೇ ನಂಬರ್128-2ರಲ್ಲಿ 13ಕುಂಟೆ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಅಕ್ರಮವಾಗಿ ಮಾರಾಟ ಮಾಡಿ ನೋಂದಣಿ ಮಾಡಲಾಗಿದೆ.
ಸ.ನಂ. 128-2ರಲ್ಲಿ ರಿ.ಸ. ನಂ. 77-31-32 ದಿನಾಂಕ 01.09.1931ರಲ್ಲಿ ಸಿ.ಬಿ. ರಾಮರಾವ್ ಅವರಿಗೆ ಸರ್ಕಾರದಿಂದ ಮಂಜೂರಾಗಿತ್ತು. ಪಹಣಿಯಲ್ಲಿ ಅಂದಿನಿಂದ ಇಂದಿನವರೆಗೆ ಸಿ.ಬಿ. ರಾಮರಾವ್ ಬೀನ್ ಸುಬ್ಬಾರಾವ್ ಎಂದು ನಮೂದಾಗಿತ್ತು. ಕೆಲವು ಭೂಗಳ್ಳರು ನಕಲಿ ದಾಖಲೆಗಳನ್ನು ಸೃಷ್ಟಿಸಿ 20.06.2012ರಂದು ನೋಂದಣಿ ಸಂಖ್ಯೆ ಜಿಬಿಡಿ-01-01061-2012-13ರಂತೆ ಬಿ.ಆರ್. ಶಂಕರಪ್ಪ ಬಿನ್ ರಾಮಚಂದ್ರಯ್ಯ, ದೊಡ್ಡಬಳ್ಳಾಪುರ ಅವರಿಗೆ ಅಕ್ರಮವಾಗಿ ನೋಂದಣಿ ಮಾಡಿರುತ್ತಾರೆ. ಇದನ್ನು ತಕ್ಷಣವೇ ತಡೆಹಿಡಿದು ಕೋಟ್ಯಂತರ ರುಪಾಯಿ ಬೆಲೆಬಾಳುವ ಜಮೀನನ್ನು ಸಾರ್ವಜನಿಕ ಉಪಯೋಗಕ್ಕ ಮೀಸಲಿಟ್ಟು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಪಂ ಸದಸ್ಯ ಆರ್.ಎನ್. ಗಂಗರತ್ನಮ್ಮ ಮತ್ತು ದಲಿತ ಮುಖಂಡರಾದ ಎನ್. ಶಿವಶಂಕರ್, ಆರ್. ಹರಿಪ್ರಕಾಶ್, ಎ. ಸತೀಶ್ ಕುಮಾರ್ ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸದರಿ ವಿಚಾರವಾಗಿ ಗೌರೀಬಿದನೂರು ತಹಸೀಲ್ದಾರ್ ನ್ಯಾಯಾಲಯದಲ್ಲಿ ಆರ್ಆರ್ಟಿಡಿಸ್ 91-12-13 ರಂತೆ ಪ್ರಕರಣ ದಾಖಲಾಗಿ ದಾಖಲಾತಿಗಳನ್ನು ಪರಿಶೀಲಿಸಿ, ಅರ್ಜಿದಾರರ ಮನವಿಯನ್ನು ವಜಾಗೊಳಿಸುವಂತೆ ಆದೇಶ ಮಾಡಿದೆ. ಸದರಿ ಪ್ರಕರಣವು ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿದ್ದು, ಮತ್ತೆ ಕೆಲವರು ಸದರಿ ಜಮೀನನ್ನು ಪುನ- ಬೇರೆಯವರಿಗೆ ಕ್ರಯ ಮಾಡಿಕೊಡಲು ಮುಂದಾಗಿದ್ದಾರೆ. ಹತ್ತಾರು ಎಕರೆ ಜಮೀನನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸದರಿ ಜಮೀನಿನ ಖಾತೆಯನ್ನು ರದ್ದುಪಡಿಸಿ, ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕಾಗಿ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಬೇಕೆಂದು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.