'ಸಿರಿತನ ಇರುವಾಗ ಪುಣ್ಯ ಕಾರ್ಯ ಮಾಡಿ'
ಚಿಂತಾಮಣಿ: ಆರೋಗ್ಯ ಚೆನ್ನಾಗಿರುವಾಗ ಆಧ್ಯಾತ್ಮಿಕ ಸಾಧನೆ, ಸಿರಿತನ ಇರುವಾಗ ಪುಣ್ಯ ಕಾರ್ಯಗಳನ್ನು ಮಾಡುವುದು ಸಾರ್ಥಕ ಬದುಕಿನ ಲಕ್ಷಣ ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅಭಿಪ್ರಾಯಪಟ್ಟಿದ್ದಾರೆ.
ತಾಲೂಕಿನ ಕೈವಾರ ಯೋಗಿ ನಾರಾಯಣ ಸಭಾಂಗಣದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಸಿಟಿಜನ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಆಧ್ಯಾತ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಆರ್ಥಿಕ ಪ್ರಗತಿಯಿಂದಲೇ ಜೀವನದ ಪ್ರಗತಿ ಎನ್ನುವುದನ್ನು ಬಿಡಬೇಕು. ಆಧ್ಯಾತ್ಮಿಕ ಚಿಂತನೆಗಳಿಗೆ ಜೀವನದ ನೋವು, ಕಷ್ಟಗಳನ್ನು ಪರಿಹರಿಸುವ ಶಕ್ತಿ ಇದೆ ಎಂದರು.
ಸಮಾಜದ ವ್ಯಕ್ತಿಗಳೊಂದಿಗೆ ಬಾಂಧವ್ಯ ಮತ್ತು ಸಹಕಾರದ ಬಾಳ್ವೆಗೆ ಆಧ್ಯಾತ್ಮ ಅಗತ್ಯವಾಗಿದೆ. ದಿನನಿತ್ಯವೂ ಮಾಡುವ ಕ್ರಮಬದ್ಧ ಪ್ರಾರ್ಥನೆಯಿಂದ ದೇಹದ ಸರ್ವತೋಮುಖ ಏಳಿಗೆ ಸುಲಭ ಸಾಧ್ಯವಾಗಿ ಆಂತರಿಕ ಶಕ್ತಿ,ಚೈತನ್ಯ ಹಾಗೂ ಸ್ಥಿರತೆ ಹೆಚ್ಚುತ್ತದೆ ಎಂದರು.
ಸುಬ್ರಹ್ಮಣ್ಯಪುರದ ಕಾರ್ಪೊರೇಟರ್ ಕೃಷ್ಣೇಗೌಡ ನಾಯಕತ್ವ ವಹಿಸಿದ್ದರು. ಶಿಬಿರದಲ್ಲಿ ಸುಮಾರು 300 ಶಿಬಿರಾರ್ಥಿಗಳು ಭಾಗವಹಿಸಿದ್ದರು.