ಕೊಳಚೆ ನೀರು ಕೆರೆಗೆ ಹರಿಸಿ
,ಮಾಲೂರು: ಕುಡಿಯುವ ನೀರಿಗಾಗಿ ಕೊರೆಸಲಾಗಿದ್ದ ಬಾವಿಗಳಲ್ಲ ವಿಫಲವಾಗುತ್ತಿದ್ದು, ನೀರಿನ ಸಮಸ್ಯೆ ನೀಗಬೇಕಾಗಿದ್ದರೆ ಶಾಶ್ವತ ನೀರಾವರಿ ಯೋಜನೆಗಳಿಂದ ಮಾತ್ರ ಸಾಧ್ಯ ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ಅವರು ಶನಿವಾರ ತಾಲೂಕಿನ ನೂಸಗೆರೆ ಗ್ರಾಮದಲ್ಲಿ ನವೀಕರಣಗೊಂಡ ಪಂಚಾಯ್ತಿ ಕಟ್ಟಡವನ್ನು ಉದ್ಘಾಟಿಸಿ, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು 195 ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಸರ್ಕಾರದ ಆದೇಶ 1200 ಅಡಿಗಳ ವರೆಗೆ ಮಾತ್ರ ಇದ್ದರೂ 1500 ಅಡಿ ಕೊರೆಸಿದರೂ ಬಾವಿಗಳಲ್ಲಿ ನೀರಿನ ಸಂಗ್ರಹ ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಶುದ್ಧೀಕರಿಸಿದ ಕೊಳಚೆ ನೀರು: ಶಾಸಕರು ತಾಲೂಕಿನ ನೀರಿನ ಸಮಸ್ಯೆ ನೀಗಬೇಕಾದರೆ ಶಾಶ್ವರ ನೀರಾವರಿ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕಾಗಿದೆ. ಎತ್ತಿನ ಹೊಳೆ ತಿರುವು ಸೇರಿದಂತೆ ಸಾವಿರಾರು ಮೈಲಿ ದೂರದಿಂದ ನೀರನ್ನು ತರುವ ಯೋಜನೆಗಳು ಫಲ ನೀಡುವುದು ಕನಿಷ್ಠ ಒಂದು ದಶಕ ಬೇಕಾಗಿರುವುದರಿಂದ ಬೆಂಗಳೂರು ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗಳಿಗೆ ನೀರು ಹರಿಯುವ ಯೋಜನೆಯನ್ನು ಅನುಷ್ಠಾನಗೊಳಿಸುವ ಕಡೆ ರಾಜ್ಯ ಸರ್ಕಾರ ಅತಿ ಜರೂರಾಗಿ ಗಮನ ಹರಿಸಬೇಕಾಗಿದೆ ಎಂದರು. ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ ಮುನಿರಾಜು, ತಾ.ಪಂ.ಅಧ್ಯಕ್ಷ ಕೆ.ಕೃಷ್ಣಪ್ಪ, ಕೋಚಿಮುಲ್ ನಿರ್ದೇಶಕ ನಂಜೇಗೌಡ ಇತರರು ಉಪಸ್ಥಿತರಿದ್ದರು.