ಶಾಶ್ವತ ನೀರಾವರಿಗಾಗಿ ಹೋರಾಟ ಅಗತ್ಯ
ಕನ್ನಡಪ್ರಭ ವಾರ್ತೆ < ಕೋಲಾರ < ಜೂ.21
ನೀರಿನ ಸಮಸ್ಯೆ ಕೇವಲ ಕುಡಿಯುವ ಮತ್ತು ಬೇಸಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಈ ನೆಲದ ತಾಪಮಾನದ ಏರುಪೇರಿಗೂ ಕಾರಣವಾಗಿದೆ. ಶಾಶ್ವತ ನೀರಾವರಿ ಎಂಬುದು ಒಂದು ತಪಸ್ಸಾಗಿ ಬರಬೇಕಿದೆ. ಯಾವ ನಾಯಕನ ಮುಂದಾಳತ್ವದಲ್ಲಿ ಕೋಲಾರ ಜಿಲ್ಲೆಗೆ ನೀರು ಹರಿದು ಬರುವಂತಾಗುತ್ತದೆಯೋ ಅಂಥ ನಾಯಕ ಜನರ ಪಾಲಿಗೆ ಆಧುನಿಕ ಭಗೀರಥನಾಗುತ್ತಾನೆ ಎಂದು ಶ್ರೀನಿವಾಸಪುರ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಿರಿಯ ಸಾಹಿತಿ ಚಾಂಪಲ್ಲಿ ಕೆ.ಎನ್. ಚಂದ್ರಶೇಖರಯ್ಯ ತಿಳಿಸಿದರು.
ಮಾವಿನ ನಾಡು ಎಂದೇ ಪ್ರಸಿದ್ಧಿ ಹೊಂದಿರುವ ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದ ನ್ಯಾಷನಲ್ ಹೈಸ್ಕೂಲ್ ರಂಗ ಮಂದಿರ ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ನೀರಿನ ಬವಣೆಯಿಂದ ತತ್ತರಿಸುತ್ತಿರುವ ಜಿಲ್ಲೆಯ ಜನತೆ ಶಾಶ್ವತ ನೀರಾವರಿಗಾಗಿ ಅನೇಕ ವರ್ಷಗಳಿಂದ ಹೋರಾಡುತ್ತಿದ್ದಾರೆ. ಮಾವಿನ ನಾಡು ನೀರಿಲ್ಲದೆ ಬರಡಾಗುತ್ತಿದೆ. ನೀರು ತರುವ ಭಗೀರಥನಿಗಾಗಿ ಜನತೆ ಕಾಯುತ್ತಿದ್ದು, ಜನರ ಬೇಡಿಕೆಯನ್ನು ಬೇಗನೆ ಈಡೇರಿಸುವುದು ನಾಯಕರ ಹೊಣೆಯಾಗಿದೆ ಎಂದರು.
ನೈಸರ್ಗಿಕ ಸಂಪತ್ತು: ಕನ್ನಡ ನಾಡಿನ ಸಿರಿ ಸಂಪತ್ತು ಎಂದರೆ ಕೇವಲ ಸಾಹಿತ್ಯ, ಕಲೆ, ಸಂಗೀತ ಮಾತ್ರವಲ್ಲ, ಇಲ್ಲಿನ ಪ್ರತಿಯೊಂದು ಕಲ್ಲು, ಮಣ್ಣು, ನೀರು ಸಕಲ ಜೀವ ರಾಶಿಗಳಿಗೆ ಅತ್ಯಗತ್ಯವಾಗಿ ಬೇಕಾದ ಅಮೂಲ್ಯವಾದ ಸಂಪತ್ತು ಆಗಿದೆ. ಶಿಲಾ ಸಂಪತ್ತು ಮತ್ತು ಮರಳನ್ನು ತಾಲೂಕಿನಿಂದ ವೈಜ್ಞಾನಿಕವಾಗಿ ಸಾಗಾಣೆ ಮಾಡಲಾಗುತ್ತಿದೆ.
ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಪ್ರಕೃತಿ ಮುನಿದುಕೊಳ್ಳಲು ಕಾರಣವಾಗಿರುವುದರಿಂದ ನೈಸರ್ಗಿಕ ಸಂಪತ್ತನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕರೆ ನೀಡಿದರು. ಸಮ್ಮೇಳನವನ್ನು ಕವಿ, ಚಿಂತಕ ಸುಬ್ಬು ಹೊಲೆಯಾರ್ ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಸ.ರಘುನಾಥ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಪಂ ಪ್ರಭಾರ ಅಧ್ಯಕ್ಷ ನಾಗರಾಜ್, ನಿಕಟಪೂರ್ವ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪಿ.ರಾಮಪ್ಪ ನಾಯ್ಡು ಇದ್ದರು.