ಸುಗ್ರೀವಾಜ್ಞೆ ಮೂಲಕ ಕನ್ನಡ ಮಾಧ್ಯಮ ಉಳಿಸಿ
ಕೋಲಾರ: ಕನ್ನಡ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮರ್ಮಘಾತವನ್ನುಂಟು ಮಾಡಿರುವುದರಿಂದ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ರಾಜ್ಯದ ಹಿತ ಕಾಪಾಡಬೇಕೆಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು.
ಶ್ರೀನಿವಾಸಪುರ ತಾಲೂಕಿನ ಯಲ್ದೂರಿನಲ್ಲಿ ಶನಿವಾರ ನಡೆದ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಗುಲಿಯ ಮಾಸಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಕನ್ನಡ ಮಾಧ್ಯಮ ಉಳಿಯದಿದ್ದರೆ ಸರ್ಕಾರಿ, ಅನುದಾನಿತ ಖಾಸಗಿ ಶಾಲೆಗಳು ಉಳಿಯುವುದು ಕಷ್ಟವಾಗುತ್ತದೆ ಎಂದರು. ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಕ್ಕೆ ಕಷ್ಟವೇನೋ ಸರಿ. ಆದರೆ, ಕನ್ನಡ ನಾಡಿನ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮೇಲ್ಮನವಿ ಸಲ್ಲಿಸಿ ಕನ್ನಡ ಮಾಧ್ಯಮ ಉಳಿಸದಿದ್ದರೆ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆಂದರು.
ಜಲಾಶಯ ನಿರ್ಮಾಣಕ್ಕೆ ಒತ್ತಾಯ: ತಮಿಳುನಾಡಿಗೆ ಹೆಚ್ಚುವರಿಯಾಗಿ ಹರಿದು ಹೋಗುವ ಮಳೆ ನೀರನ್ನು ತಡೆಯಲು ಸರ್ಕಾರ ಮೇಕೆದಾಟು ಬಳಿ ಜಲಾಶಯ ನಿರ್ಮಿಸಲು ದಿಟ್ಟ ಕ್ರಮ ಕೈಗೊಳ್ಳಬೇಕು. ಕಾವೇರಿ ನ್ಯಾಯ ಮಂಡಳಿಯ ತೀರ್ಪಿನ ಪ್ರಕಾರ ತಮಿಳುನಾಡಿಗೆ ಪ್ರತಿವರ್ಷ 205 ಟಿಎಂಸಿ ಕೊಡಲು ಕನ್ನಡಿಗರ ವಿರೋಧವಿಲ್ಲ. ಆದರೆ, ಹೆಚ್ಚುವರಿಯಾಗಿ ಹರಿದು ಸಮುದ್ರ ಸೇರುತ್ತಿರುವ ನೀರನ್ನು ಕರ್ನಾಟಕದ ಜತೆ ಉಪಯೋಗಿಸಲು ಅಡ್ಡಿ ಉಂಟು ಮಾಡುವುದು, ಇಲ್ಲಸಲ್ಲದ ವಿವಾದ ಸೃಷ್ಟಿಸುವುದು ಯೋಗ್ಯವಲ್ಲವೆಂದು ತಮಿಳು ನಾಡಿನ ಸರ್ಕಾರದ ಧೋರಣೆಯನ್ನು ಸೂಚ್ಯವಾಗಿ ವಿರೋಧಿಸಿದರು.