ಕಸಕ್ಕಿಂತ ಚರಂಡಿಯದ್ದೇ ಸಮಸ್ಯೆ
ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಪಟ್ಟಣದಲ್ಲಿ ಕಸ ವಿಲೇವಾರಿಗಾಗಿ ಹೊಸ ವಿಧಾನ ಅನುಸರಿಸಲಾಗುತ್ತಿದೆ. ಇಲ್ಲಿ ಡಸ್ಟ್ಬಿನ್ ಮುಕ್ತ ಪರಿಪೂರ್ಣ ಸ್ವಚ್ಛತೆ ತತ್ವದೊಂದಿಗೆ ಶ್ರಮಿಸುತ್ತಿರುವುದರಿಂದ ಕಸದ ತೊಂದರೆ ಕಡಿಮೆ. ಆದರೆ, ಚರಂಡಿಗಳಲ್ಲಿ ರಾರಾಜಿಸುತ್ತಿರುವ ತ್ಯಾಜ್ಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದೆ.
ಬಾಗೇಪಲ್ಲಿ ಒಟ್ಟು 23 ವಾರ್ಡುಗಳನ್ನು ಹೊಂದಿದೆ. ಇಲ್ಲಿ ಪ್ರತಿನಿತ್ಯ 9 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, 8 ಟನ್ ತ್ಯಾಜ್ಯ ಖಾಲಿಯಾಗುತ್ತಿದೆ. ಕಸ ವಿಲೇವಾರಿಗೆ ಸಿಬ್ಬಂದಿ ಕೊರತೆ ಇಲ್ಲ. 45 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ 12 ಕಾಯಂ, ದಿನಗೂಲಿ 3, ಹೊರ ಗುತ್ತಿಗೆ 27, ಮೂವರು ಚಾಲಕರಿದ್ದಾರೆ. ಕಸ ಸಂಗ್ರಹದ 20 ತಳ್ಳುವ ಗಾಡಿಗಳಿದ್ದು, ಮನೆ ಮನೆಗಳಿಗೆ ತೆರಳಿ ತ್ಯಾಜ್ಯ ಪಡೆದು ನೇರವಾಗಿ ಸಾಗಣೆ ಮಾಡಲು ಒತ್ತು ಕೊಡಲಾಗಿದೆ. ಇದಕ್ಕಾಗಿ ಪ್ರತಿ ವಾರ್ಡಿಗೆ 3 ಜನರ ತಂಡ ಹೋಗುತ್ತದೆ.
ಕಸ ಪಡೆಯುವಾಗ ಹಣ ವಸೂಲಿ ಮಾಡುವುದು ಇಲ್ಲವೇ ಪುರಸಭೆ ಇಂತಿಷ್ಟು ಶುಲ್ಕ ಹಾಕುವುದು ಇಲ್ಲಿಲ್ಲ. ಪಟ್ಟಣದಲ್ಲಿ ಕೊಳೆಯುವ ಮತ್ತು ಕೊಳೆಯದ ತ್ಯಾಜ್ಯವನ್ನು 2 ಟ್ರ್ಯಾಕ್ಟರ್ ಮೂಲಕ ಪ್ರತ್ಯೇಕವಾಗಿ ತೆಗೆದುಕೊಂಡು ಹೋಗಿ ಪಟ್ಟಣದಿಂದ 5 ಕಿ.ಮೀ ದೂರದ ಕಾಶಾಪುರ ಬಳಿ ಇರುವ 4 ಎಕರೆ 32 ಗುಂಟೆ ಜಾಗದಲ್ಲಿ ಕಸ ಡಂಪಿಂಗ್ ಮಾಡಲಾಗುತ್ತಿದೆ. ಕಳೆದ 5 ವರ್ಷಗಳ ಹಿಂದೆ 5 ಲಕ್ಷ ಕೊಟ್ಟು ಅಗತ್ಯವಿರುವ ಜಾಗ ಖರೀದಿಸಿರುವುದರಿಂದ ಡಂಪಿಂಗ್ ಕಾರ್ಯಕ್ಕೆ ಅನುಕೂಲವಾಗಿದೆ. ಆದರೆ, ಇಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಲೇ ಇದೆ. ಪುನರ್ ಬಳಕೆ ಮಾಡುವ ಕಾರ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಎರೆಹುಳ ಗೊಬ್ಬರ ತಯಾರಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಸೂರ್ಯಾಪೇಟೆ ಯೋಜನೆ; ಪಟ್ಟಣದಲ್ಲಿ ಕಸ ವಿಲೇವಾರಿಯಲ್ಲಿ ನೂತನ ತಂತ್ರ ಅನುಸರಿಸಲು ಅಧ್ಯಯನಕ್ಕಾಗಿ ಈ ಹಿಂದೆ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳು ಆಂಧ್ರ ಪ್ರದೇಶದ ಸೂರ್ಯಾಪೇಟೆಗೆ ಹೋಗಿದ್ದರು. ಅಲ್ಲಿ ಡಸ್ಟ್ಬಿನ್ ಬಳಕೆ ಇಲ್ಲ, ಮನೆ ಮನೆಗೆ ತೆರಳಿ ಕಸ ಸಂಗ್ರಹ, ಜನರು ಬೇರೆ ಎಲ್ಲೂ ತ್ಯಾಜ್ಯ ಎಸೆಯದಿರುವುದು, ಸಮರ್ಪಕವಾಗಿ ಬಡಾವಣೆಗಳಲ್ಲಿ ಮತ್ತು ಚರಂಡಿಗಳಲ್ಲಿ ಸ್ವಚ್ಛತೆ ಕಾಪಾಡಿರುವುದನ್ನು ನೋಡಿ ಬಂದಿದ್ದಾರೆ.ಅಲ್ಲಿನ ವಿಧಾನಗಳನ್ನು ಸ್ವಲ್ಪ ಪರಿಷ್ಕರಿಸಿ ಇಲ್ಲೂ ಪಾಲಿಸಲಾಗುತ್ತಿದೆ. ಇದರಿಂದ ತ್ಯಾಜ್ಯ ಕಿರಿಕಿರಿಯ ಬಗ್ಗೆ ದೂರುಗಳು ಕೇಳಿ ಬರುತ್ತಿಲ್ಲ. ಅಲ್ಲದೇ ಇಲ್ಲಾಗುತ್ತಿರುವ ಸುಧಾರಣೆಗೆ ಜನರಿಂದ ಮೆಚ್ಚುಗೆ ಜೊತೆಗೆ ಸಹಕಾರವೂ ಸಿಗುತ್ತಿದೆ.