ಶುದ್ಧೀಕರಣ ಘಟಕದಿಂದ ಅಶುದ್ಧ ನೀರು
ಬಾಗೇಪಲ್ಲಿ: ಶುದ್ಧವಾದ ಕುಡಿಯುವ ನೀರನ್ನು ಸಮರ್ಪಕವಾಗಿ ಪಟ್ಟಣದ ನಾಗರಿಕರಿಗೆ ಸರಬರಾಜು ಮಾಡಬೇಕಾದ ಪುರಸಭೆ ಅಧಿಕಾರಿಗಳು ನೀರನ್ನು ಶುದ್ದೀಕರಿಸದೇ ನೇರವಾಗಿ ಸರಬರಾಜು ಮಾಡುತ್ತಿರುವುದು ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಉದ್ದೇಶದಿಂದ ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ಪಟ್ಟಣದ ಸಂತೆ ಮೈದಾನದ ಪಕ್ಕದಲ್ಲಿ ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿತ್ತು.
ಆದರೆ ಶುದ್ದೀಕರಣ ಘಟಕದಲ್ಲಿನ ಬಹುತೇಕ ಎಲ್ಲಾ ಯಂತ್ರೋಪಕರಣಗಳು ಕೆಟ್ಟು ನಿಂತು 4 ವರ್ಷಗಳು ಕಳೆದರೂ ಸಹ ನಮಗೂ ಈ ಶುದ್ದೀಕರಣ ಘಟಕಕ್ಕೂ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ಅಧಿಕಾರಿಗಳಿದ್ದಾರೆ.
ಬ್ಯಾರೇಜ್ ಖಾಲಿ: ಮಳೆಯ ಅಭಾವದಿಂದ ಪಟ್ಟಣದ ಜನತೆಗೆ ಕುಡಿಯುವ ನೀರಿನ ಏಕೈಕ ಆಸರೆಯಾಗಿರುವ ಚಿತ್ರಾವತಿ ಬ್ಯಾರೇಜ್ ಖಾಲಿಯಾಗಿದೆ. ಇದರಿಂದ ನಾಗರಿಕರು ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಳಚೆ ಮತ್ತು ಕುಲಷಿತ ನೀರನ್ನು ಪಟ್ಟಣದ ಸಾರ್ವಜನಿಕರು ಕುಡಿಯಬೇಕಾಗಿದೆ. ಈ ಸಂಬಂಧ ಅನೇಕ ಸಲ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಚಿತ್ರಾವತಿ ಬ್ಯಾರೇಜಿನಲ್ಲಿರುವಂತಹ ನೀರು, ಬ್ಯಾರೇಜಿನಲ್ಲಿರುವ ಕೊಳವೆ ಬಾವಿಗಳ ನೀರು ಸೇರಿದಂತೆ ಪಟ್ಟಣದ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳಿಂದ ಪಟ್ಟಣದಲ್ಲಿರುವಂತಹ ಶುದ್ಧೀಕರಣ ಘಟಕಕ್ಕೆ ಬಂದು ಶುದ್ಧೀಕರಣಗೊಂಡ ನಂತರ ಸರಬರಾಜು ಮಾಡಬೇಕು. ಆದರೆ, ಶುದ್ದೀಕರಣ ಘಟಕದಲ್ಲಿ ಸ್ವಚ್ಛತೆ ಇಲ್ಲ. ತ್ಯಾಜ್ಯಗಳು ತುಂಬಿಕೊಂಡು ಕೊಳೆತು ನಾರುತ್ತಿರುತ್ತಿದೆ. ಇದರ ಮೂಲಕವೇ ನೀರನ್ನು ಪಟ್ಟಣದ ನಾಗರಿಕರಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗಲಾದರೂ ಸಂಬಂಧಪಟ್ಟವರು ಈ ಶುದ್ದೀಕರಣ ಘಟಕವನ್ನು ಮೊದಲು ಶುದ್ಧಗೊಳಿಸಿ ನೀರು ಪೂರೈಸಲಿ ಎಂದು ಎಂದು ಒತ್ತಾಯಿಸಿದ್ದಾರೆ.