ಅಹಿಂದ ಮಕ್ಕಳಿಗೆ ಕರ್ನಾಟಕ ದರ್ಶನ
ಕೋಲಾರ/ಶ್ರೀನಿವಾಸಪುರ: ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕೆ ಪೂರಕವಾಗಲೆಂದು ಸರ್ಕಾರ ಕರ್ನಾಟಕ ದರ್ಶನ ಪ್ರವಾಸ ಹಮ್ಮಿಕೊಂಡಿದ್ದು ತಾಲೂಕಿನ 155 ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ಕಲ್ಪಿಸಲಾಗಿದೆ ಎಂದು ಶ್ರೀನಿವಾಸಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಕೆ. ರಾಘವೇಂದ್ರ ತಿಳಿಸಿದರು.
ಸಾರ್ವಜನಿಕ ಶಿಕ್ಷಣಾ ಇಲಾಖೆ ಮತ್ತು ಜಿಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ದರ್ಶನ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿ, ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೊರ ಪ್ರಪಂಚ ನೋಡುವುದರಲ್ಲಿ ವಂಚನೆ ಆಗಬಾರದೆಂಬ ಉದ್ದೇಶದಿಂದ ಸರ್ಕಾರ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮ ರೂಪಿಸಿದ್ದು ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಮೋಜಿಗಾಗಿ ಎಂದು ಪರಿಗಣಿಸದೆ ರಾಜ್ಯದ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಹೊಂದಿರುವ ಊರುಗಳ ಮಹತ್ವವನ್ನು ತಿಳಿದು ದಾಖಲೆ ಮಾಡಬೇಕೆಂದರು.
ತಾಲೂಕಿನಲ್ಲಿ ಪ್ರತಿ ಪ್ರೌಡ ಶಾಲೆಯಿಂದ ಆರು ವಿದ್ಯಾರ್ಥಿಗಳಂತೆ ಒಟ್ಟು 155 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ವಿದ್ಯಾರ್ಥಿಗೆ 3,500 ರು. ವೆಚ್ಚದಲ್ಲಿ ಅವಶ್ಯಕತೆ ಇರುವ ಪರಿಕರಗಳಿಗೆ ಹಾಗೂ ಶೈಕ್ಷಣಿಕ ಪ್ರವಾಸಕ್ಕೆ ವಿನಿಯೋಗಿಸಲಾಗುತ್ತದೆ ಎಂದು ವಿವರಿಸಿದರು.
ಪ್ರವಾಸದ ಹೊಣೆ ಹೊತ್ತ ಶಿಕ್ಷಕರು ಮಕ್ಕಳನ್ನು ಜೋಪಾನವಾಗಿ ಕರೆದುಕೊಂಡು ಹೋಗಿ ಅದೇ ರೀತಿ ಸುರಕ್ಷಿತವಾಗಿ ಕರೆತರಬೇಕೆಂದರು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಿಕ್ಷಕರನ್ನು ಹೊರೆತು ಪಡಿಸಿ ಒಬ್ಬಂಟಿಯಾಗಿ ಓಡಾಡಬಾರದು, ನದಿ, ಸಮುದ್ರ, ಬೆಟ್ಟಗಳ ಸಮೀಪ ತೆರಳಬಾರದೆಂದು ಸೂಚಿಸಿದರು. ಈ ಸಂದರ್ಭದಲ್ಲಿ ಎಂ. ಬೈರೇಗೌಡ, ದೇವರೆಡ್ಡಿ, ಮುನಿರೆಡ್ಡಿ, ಅಮರಬಾಬು, ಜಿ.ಕೆ. ಶ್ರಿನಿವಾಸಲು ಎಂ.ನಾರಾಯಣಸ್ವಾಮಿ ಪುರುಷೋತ್ತಮ್, ಬೈರಾರೆಡ್ಡಿ ಇದ್ದರು.