ಜೀವನದಲ್ಲಿ ಜುಗುಪ್ಸೆ: ದಂಪತಿ ನೇಣಿಗೆ ಶರಣು
ಕೋಲಾರ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಿ.ವೆಂಕಟಾಪುರದಲ್ಲಿ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ನಡೆದಿದೆ.
ಅರುಣ್ ಕುಮಾರ್(25), ಸೌಭಾಗ್ಯ(21) ಮೃತಪಟ್ಟಿರುವ ದಂಪತಿ.
ಸೌಭಾಗ್ಯ ಬೆಂಗಳೂರಿನ ಕಾಮಾಕ್ಷಿಪಾಳ್ಯದವರಾಗಿದ್ದು ಸೋದರ ಮಾವನನ್ನು ಪ್ರೀತಿಸಿ ಮದುವೆ ಆಗಿದ್ದರು. ಇದಕ್ಕೆ ಮನೆಯಲ್ಲಿ ಒಪ್ಪಿಗೆ ಇರಲಿಲ್ಲವೆನ್ನಲಾಗಿದೆ. ಜಿ.ವೆಂಕಟಾಪುರ ಗ್ರಾಮದ ಮಾವನ ಮನೆಯಲ್ಲೂ ನೆಮ್ಮದಿಯಿಂದ ಬದುಕಲು ಅವಕಾಶ ಸಿಗದೆ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು ಎನ್ನಲಾಗಿದೆ. ಗರ್ಭಿಣಿಯಾಗಿದ್ದ ಸೌಭಾಗ್ಯಗೆ ತವರು ಮನೆಯಲ್ಲಿ ಮಾತ್ರವಲ್ಲದೆ ತನ್ನ ತಂದೆ- ತಾಯಿಗಳಿಂದಲೂ ನೆಮ್ಮದಿ ಸಿಗುತ್ತಿಲ್ಲವೆಂದು ಮನನೊಂದಿದ್ದ ಗಂಡ ಅರುಣ್ ಕುಮಾರ್ ಹೆಂಡತಿಯೊಂದಿಗೆ ನೇಣಿಗೆ ಶರಣಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅರುಣ್ ಕುಮಾರ್ ಅವರ ತಂದೆ ನಟರಾಜು ಮತ್ತು ತಾಯಿ ರುಕ್ಮಿಣಿಯಮ್ಮ ಅವರನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.