ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತಾಪಂ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ?

Mainashree
Updated On : 23 Jun 2014, 11:12 am

ಬಂಗಾರಪೇಟೆ: ಬಿಜೆಪಿ ವಶದಲ್ಲಿದ್ದ ತಾಪಂ ಆಡಳಿತವನ್ನು ಕೊನೆ ಅವಧಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ತಮಗೆ ಅನುಕೂಲವಾಗುವ ರೀತಿ ಮೀಸಲು ನಿಗದಿಪಡಿಸಿಕೊಳ್ಳುವ ಮೂಲಕ ಆಡಳಿತವನ್ನು ಮತ್ತೆ ಕಾಂಗ್ರೆಸ್ ವಶಪಡಿಸಿಕೊಳ್ಳಲು ಮುಂದಾಗಿದೆ.
ಮೀಸಲು ನಿಗದಿ ಮೂಲಕ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಕಳೆದ ಮೂರುವರೆ ವರ್ಷಗಳ ಹಿಂದೆ ನಡೆದ ತಾಪಂ ಚುನಾವಣೆಯಲ್ಲಿ ಬಿಜೆಪಿ ವಶಪಡಿಸಿಕೊಂಡಿತ್ತು. ಈಗ ಬದಲಾದ ರಾಜಕೀಯ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಕೆಲವರು ಹಾಗೂ ಪಕ್ಷೇತರ ಸದಸ್ಯರು ಕಾಂಗ್ರೆಸ್ ಸೇರುತ್ತಿದ್ದಾರೆ. 25 ಸದಸ್ಯರ ಬಲ ಹೊಂದಿರುವ ತಾಪಂನಲ್ಲಿ ಕಾಂಗ್ರೆಸ್‌ನ 8 ಮಂದಿ ಸದಸ್ಯರು ಇದ್ದು, ಅಧಿಕಾರ ಹಿಡಿಯುವುದು ಕಷ್ಟಕವಾಗಿತ್ತು. ಆದರೆ ಈಗ ತಾಪಂ ಆಡಳಿತ ಮಂಡಳಿಯ ಮೂರನೆ ಹಾಗೂ ಕೊನೆ ಅವಧಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸರ್ಕಾರದ ಮೀಸಲು ಪ್ರಕಟವಾಗಿದ್ದು ಅದರಂತೆ ಅಧ್ಯಕ್ಷಗಿರಿಗೆ ಎಸ್ಸಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ನಿಗದಿಯಾಗಿತ್ತು. ಈಗ ಸರ್ಕಾರ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಎಸ್ಸಿ ಮಹಿಳೆಯನ್ನು ಎಸ್ಟಿ ಮಹಿಳೆಯಾಗಿ ಮಾರ್ಪಡಿಸಿರುವುದರಿಂದ ಬಿಜೆಪಿ ಪಾಳಯದಲ್ಲಿ ಮಸಕು ಕವಿದಿದೆ. ಈ ಮೀಸಲಾತಿಯಿಂದ ಆಯ್ಕೆಯಾದ ಮಹಿಳೆ ಬಿಜೆಪಿಯಲ್ಲಿ ಇಲ್ಲ.  ಪಕ್ಷೇತರ ಸದಸ್ಯೆ ಚಿಕ್ಕಅಂಕಂಡಹಳ್ಳಿ ಕ್ಷೇತ್ರದ ವೆಂಕಟರತ್ನಮ್ಮ ಎಸ್ಟಿಯಿಂದ ಆಯ್ಕೆಯಾಗಿರುವ ಏಕೈಕ ಮಹಿಳೆ ಸದಸ್ಯೆಯಾಗಿದ್ದು, ಅವರು ಈಗ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವುದರಿಂದ ವೆಂಕಟರತ್ನಮ್ಮರಿಗೆ ಅಧ್ಯಕ್ಷ ಗಿರಿ ಬಯಸದೆ ಬಂದ ಭಾಗ್ಯವಾಗಿದ್ದರೆ ಬಿಜೆಪಿಯವರಿಗೆ ಆಡಳಿತ ನಡೆಸುವಷ್ಟು ಬಹುಮತವಿದ್ದರೂ ಮೀಸಲಾತಿಯಿಂದ ಅಧಿಕಾರ ಕಳೆದುಕೊಳ್ಳುವಂತಾಗಿದೆ. ಈ ನಡುವೆ ಬಿಜೆಪಿ ಕೆಲವು ನಾಯಕರು ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮೀಸಲಾತಿ ನಿಗದಿಪಡಿಸಿ ನಂತರ ಶಾಸಕರ ಒತ್ತಡಕ್ಕೆ ಮಣಿದು ಎಸ್ಟಿಗೆ ಬದಲಾಯಿಸಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಿಂದ ಚುನಾವಣೆಗೆ ತಡೆಯಾಜ್ಞೆ ತರಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.
ಜುಲೈ 2ಕ್ಕೆ ತಾಪಂ ಚುನಾವಣೆ ನಿಗದಿ
ಬಂಗಾರಪೇಟೆ: ತಾಲೂಕು ಪಂಚಾಯ್ತಿ ಮೂರನೆ ಹಾಗೂ ಕೊನೆಯ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಜುಲೈ 2ರಂದು ಚುನಾವಣೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ ಎಂದು ಕೋಲಾರ ಉಪ ವಿಭಾಗಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ. ಒಟ್ಟು 25ಸದಸ್ಯರ ಬಲ ಹೊಂದಿದ್ದು ಬಿಜೆಪಿ 14, ಕಾಂಗ್ರೆಸ್ 8, ಜೆಡಿಎಸ್ 2 ಹಾಗೂ ಪಕ್ಷೇತರ ಸದಸ್ಯರು ಒಬ್ಬರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಎಸ್‌ಟಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ನಿಗದಿಪಡಿಸಲಾಗಿದೆ. ಸರ್ಕಾರದ ಮೀಸಲು ಆಧಾರಿತ ಎಸ್‌ಟಿ ಮಹಿಳೆ ಬಿಜೆಪಿಯಲ್ಲಿ ಇಲ್ಲ. ಪಕ್ಷೇತರ ಸದಸ್ಯೆ ಚಿಕ್ಕಅಂಕಂಡಹಳ್ಳಿ ಕ್ಷೇತ್ರದ ವೆಂಕಟರತ್ನಮ್ಮ ಮಾತ್ರ ಇದ್ದು, ಅವರೀಗ ಕಾಂಗ್ರೆಸ್ ಸೇರಿರುವುದರಿಂದ ತಾಪಂ ಆಡಳಿತ ಮಂಡಳಿ ಕಾಂಗ್ರೆಸ್ ವಶವಾಗುವುದು ಬಹುತೇಕ ಖಚಿತವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement