ನಕಲಿ ದರ್ಬಾರ್ ಖಂಡಿಸಿ ತಾಪಂ ಕಚೇರಿಗೆ ಮುತ್ತಿಗೆ
ಮಾಲೂರು: ನಕಲಿ ಹಕ್ಕು ಪತ್ರ ಪಡೆದಿರುವ ಪ್ರಭಾವಿ ವ್ಯಕ್ತಿ ಗ್ರಾಮದ ಹರಿಜನ ಕಾಲೋನಿ ರಸ್ತೆಯಲ್ಲೇ ಅಡ್ಡವಾಗಿ ಮನೆ ಕಟ್ಟುತ್ತಿರುವುದನ್ನು ಪ್ರತಿಭಟಿಸಿ ತಾಲೂಕಿನ ಸೂಣ್ಣಹಳ್ಳಿ ಗ್ರಾಮದ ಹರಿಜನ ಕಾಲೋನಿ ನಿವಾಸಿಗಳು ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಲಿಂಗಪ್ಪ, ಎಂಬವರು ರಸ್ತೆಯ ಜಾಗವನ್ನು 1990-91ರಲ್ಲಿ ಹಕ್ಕು ಪತ್ರ ಪಡೆಯಲಾಗಿದ್ದು, ಈಗ ಮನೆ ನಿರ್ಮಿಸಲಾಗುತ್ತಿದೆ ಎನ್ನುತ್ತಿದ್ದಾರೆ. ಮನೆ ನಿಮಾರ್ಣವಾದರೆ ಹರಿಜನ ಕಾಲೋನಿಗೆ ಹೋಗಲು ರಸ್ತೆಯೇ ಇಲ್ಲದಂತಾಗುತ್ತದೆ. ಈ ಬಗ್ಗೆ ಕಾಲೋನಿಯವರು ಪ್ರಶ್ನಿಸಿದರೆ ಲಿಂಗಪ್ಪ ದೌರ್ಜನ್ಯವೆಸುಗುತ್ತಿದ್ದಾರೆ. ಇದೇ ರೀತಿ ಗ್ರಾಮದ ಹನುಮಂತಪ್ಪ ಅವರ ಪುತ್ರ ಮಂಜುನಾಥ್ ಸಹ ನಕಲಿ ಹಕ್ಕು ಪತ್ರದ ಮೂಲಕ ಜಾಗ ಖರೀದಿಸಿ ಮನೆ ಕಟ್ಟಲು ಪಾಯ ಹಾಕಿದ್ದಾರೆ. ಇಂತಹ ನಕಲಿ ಹಕ್ಕು ಪತ್ರಗಳಿಂದ ಗ್ರಾಮದ ಹರಿಜನ ಕಾಲೋನಿಗೆ ಹೋಗಲು ಅಡ್ಡಿಯಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ತಾಪಂ ಸದಸ್ಯ ಲೋಕೇಶ್, ಮುಖಂಡ ರಾಜಪ್ಪ, ಗ್ರಾಮದ ಮುಖಂಡರುಗಳಾದ ಎಸ್.ಎಂ.ವೆಂಕಟೇಶ್, ರಾಜೇಶ್, ವಿಜಿ, ತಿಮ್ಮರಾಯಪ್ಪ, ಯಲ್ಲಪ್ಪ, ಶ್ರೀನಿವಾಸ್, ಪ್ರಕಾಶ್, ನಾಗರಾಜ್, ಮಂಜುನಾಥ್, ಮುರಳಿ, ಚಂದ್ರಪ್ಪ, ಶಂಕರ ಇದ್ದರು.