ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಮೆಗತಿ ಕಾಮಗಾರಿ; ಜನರಿಗೆ ತಪ್ಪದ ಕಿರಿಕಿರಿ

Mainashree
Updated On : 24 Jun 2014, 11:09 am

ಬಂಗಾರಪೇಟೆ: ಆಮೆ ನಡಿಗೆಯಲ್ಲಿ ಸಾಗಿರುವ ಪುರಸಭೆ ಹೂವು ಮತ್ತು ತರಕಾರಿ ಮಾರುಕಟ್ಟೆಯ ಮಳಿಗೆಗಳ ನಿರ್ಮಾಣ ಕಾರ್ಯಕ್ಕೆ ವೇಗ ನೀಡಿ ತ್ವರಿತವಾಗಿ ಉದ್ಘಾಟಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಹಿಂದಿನ ಪುರಸಭೆ ಆಡಳಿತ ಮಂಡಳಿ ಪಟ್ಟಣದಲ್ಲಿ ಹೂವು ಮತ್ತು ತರಕಾರಿ ಮಾರುಕಟ್ಟೆಗೆ ಸೂಕ್ತವಾದ ಸ್ಥಳಾವಕಾಶ ಕೊರತೆಯಿಂದ ವ್ಯಾಪಾರಸ್ಥರು ಸಾರ್ವಜನಿಕರ ಸಂಚಾರಕ್ಕೆ ಮೀಸಲಿಟ್ಟಿರುವ ಬಜಾರ್ ರಸ್ತೆಯಲ್ಲಿ, ಸಾರ್ವಜನಿಕರ ಆಸ್ಪತ್ರೆ ಹಿಂಭಾಗದ ರಸ್ತೆಗಳಲ್ಲಿ ಫುಟ್ಪಾತ್ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಇದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ನಿತ್ಯ ಕಿರಿಕಿರಿ ಉಂಟಾಗಿತ್ತು. ಇನ್ನು ಹಬ್ಬದ ದಿನಗಳಂತೂ ಈ ರಸ್ತೆಗಳಲ್ಲಿ ಕಾಲಿಡಲೂ ಸಾಧ್ಯವಿಲ್ಲದಷ್ಟು ಜನ ದಟ್ಟಣೆ ಇರುತ್ತಿತ್ತು. ಈ ಗೊಂದಲವನ್ನು ನಿವಾರಿಸಲು ಪುರಸಭೆ ಹಲವು ಬಾರಿ ಫುಟ್ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಕೈ ಹಾಕಿ ವ್ಯಾಪಾರಸ್ಥರಿಂದ ವಿರೋಧ ವ್ಯಕ್ತ್ತವಾದ ಕಾರಣ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು.
ತಾಪಂ ಕಚೇರಿ ಹಿಂಭಾಗದಲ್ಲಿರುವ ಪುರಸಭೆ ಹಳೇ ವಸತಿ ಗೃಹಗಳನ್ನು ಕೆಡವಿ ಸುಸಜ್ಜಿತ ಹೂವು ಹಣ್ಣು ಮತ್ತು ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲು ಹಿಂದಿನ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿತ್ತು. ಈ ಯೋಜನೆಗೆ ಮುಖ್ಯಮಂತ್ರಿಗಳ ನಿಧಿಯಿಂದ ಹಾಗೂ ಪುರಸಭೆ ನಿಧಿಯಿಂದ ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗಿ ಈಗಾಗಲೇ ಕಾಮಗಾರಿ ಸಹ ಪ್ರಾರಂಭಿಸಿದೆ. ಆದರೆ ಒಂದೂವರೆ ವರ್ಷವಾದರೂ ಕಾಮಗಾರಿ ಮಾತ್ರ ವೇಗವಾಗಿ ಮುಂದೆ ಸಾಗಿಲ್ಲ. ಆಮೆ ನಡಿಗೆಯಲ್ಲಿ ಸಾಗಿರುವುದು ಪುರಸಭೆ ಆಡಳಿತಕ್ಕೆ ಹಿಡಿದ ಕೈಕನ್ನಡಿಯಾಗಿದೆ. ಒಂದೂವರೆ ವರ್ಷದಲ್ಲಿ ಕೇವಲ 8 ಮಳಿಗೆಳನ್ನು ಮಾತ್ರ ನಿರ್ಮಾಣ ಮಾಡಲಾಗಿದೆ. ಉಳಿದ ನೂರಕ್ಕೂ ಹೆಚ್ಚು ಅಂಗಡಿಗಳನ್ನು ನಿರ್ಮಿಸಲು ಇನ್ನು ಎಷ್ಟು ವರ್ಷಗಳು ಬೇಕು ಸ್ವಾಮಿ ಎಂದು ಪುರಸಭೆಯನ್ನು ನಾಗರೀಕರು ಪ್ರಶ್ನಿಸುವಂತಾಗಿದೆ.
ಶಾಸಕರು ಪುರಸಭೆ ಆಡಳಿತ ಮಂಡಳಿ ಎರಡೂ ಕಾಂಗ್ರೆಸ್ ವಶದಲ್ಲಿದ್ದರೂ ಕಾಮಗಾರಿ ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಯಾರಿಂದಲೂ ಲಭ್ಯವಿಲ್ಲ. ಜನರ ಹಿತದೃಷ್ಟಿಯಿಂದ ತ್ವರಿತವಾಗಿ ಮಾರುಕಟ್ಟೆಯನ್ನು ವಿಳಂಬ ಮಾಡದೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಬೇಕೆಂದು ಸಾರ್ವಜನಿಕರು ಪುರಸಭೆಯನ್ನು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement