ಎರಡು ಅಂಗಡಿಗಳಿಗೆ ನುಗ್ಗಿ ನಗದು, ವಸ್ತುಗಳ ಕಳವು
ಬಂಗಾರಪೇಟೆ: ಒಂದೇ ರಾತ್ರಿಯಲ್ಲಿ ಎರಡು ಅಂಗಡಿಗಳಲ್ಲಿ ಕಳ್ಳರು ತಮ್ಮ ಕೈ ಚಳಕವನ್ನು ತೋರಿಸಿ ಒಟ್ಟು ನಗದು ಸೇರಿದಂತೆ 28ಸಾವಿರ ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಹೋಗಿರುವ ಘಟನೆ ಕಳೆದ ರಾತ್ರಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕೆಜಿಎಫ್ ರಸ್ತೆಯಲ್ಲಿ ರೈಲ್ವೆ ಕ್ವಾಟ್ರಸ್ ಮುಂಭಾಗದಲ್ಲಿರುವ ಗೋವಿಂದೇಗೌಡ ಎಂಬುವರ ಫ್ಯಾನ್ಸಿ ಸ್ಟೋರ್ ಮತ್ತು ಅದರ ಪಕ್ಕದಲ್ಲೇ ಇರುವ ಚಿಲ್ಲರೆ ಅಂಗಡಿಯಲ್ಲೇ ಕಳವು ನಡೆದಿದ್ದು, ಮೊದಲು ಕಳ್ಳರು ಗೋವಿಂದೇಗೌಡರ ಬಳೆ ಅಂಗಡಿ ಬೀಗ ಮುರಿದು ಒಳ ಪ್ರವೇಶ ಮಾಡಿ ಗಲ್ಲಾಪೆಟ್ಟಿಗೆಯಲ್ಲಿದ್ದ 5 ಸಾವಿರ ನಗದು ಹಾಗೂ 20ಸಾವಿರ ಮೌಲ್ಯದ ಫ್ಯಾನ್ಸಿ ವಸ್ತುಗಳನ್ನು ದೋಚಲಾಗಿದೆ. ನಂತರ ಪಕ್ಕದಲ್ಲೇ ಇರುವ ಕೇಶವ ಎಂಬುವರ ಚಿಲ್ಲರೆ ಅಂಗಡಿಯ ಬೀಗ ತೆರೆದು 3ಸಾವಿರ ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ನಂತರ ಎರಡು ಅಂಗಡಿಗಳ ಬಳಿಯಿರುವ ಔಷಧಿ ಅಂಗಡಿಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ಮಾಡಿದ್ದಾರೆ,ಫಲಕಾರಿಯಾಗದಿದ್ದಾಗ ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾರಿ ಗಾಳಿಗೆ ಅರಳಿ ಮರದ ರಂಬೆ ಬಿದ್ದು ವ್ಯಕ್ತಿ ಸಾವು
ಚಿಕ್ಕಬಳ್ಳಾಪುರ: ಅರಳಿ ಮರದ ಬೃಹತ್ ಗಾತ್ರದ ರೆಂಬೆಯೊಂದು ತಲೆ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿರುವ ದುರ್ಘಟನೆ ನಗರದ ವಾಪಸಂದ್ರದ ರೇಷ್ಮೆ ಗೂಡು ಮಾರುಕಟ್ಟೆ ಸಮೀಪ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಮೃತ ದುರ್ದೈವಿ ಸಂಜೀವರಾಯಪ್ಪ (61 ವರ್ಷ). ಮನೆಗೆ ಹಾಲನ್ನು ತರಲು ಬೆಳಿಗ್ಗೆ ಹೊರ ಬಂದ ಸಂಜೀವರಾಯಪ್ಪ ರೇಷ್ಮೆ ಗೂಡು ಮಾರುಕಟ್ಟೆ ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಜೋರಾಗಿ ಬೀಸಿದ ಗಾಳಿಗೆ ಸಮೀಪದಲ್ಲಿಯೇ ಇದ್ದ ಅರಳಿಮರದ ರೆಂಬೆ ಮನೆಯೊಂದರ ಚಾವಣಿ ಮೇಲೆ ಬಿದ್ದಿದ್ದು ಅದರ ರಭಸಕ್ಕೆ ಚಾವಣಿ ರೆಂಬೆ ಸಮೇತ ಸಂಜೀವರಾಯಪ್ಪರ ತಲೆಗೆ ತಗುಲಿದೆ. ಈ ಮಧ್ಯೆ ಕಾಲು ಮುರಿದಿದೆ. ಚಾವಣಿ ಮತ್ತು ರೆಂಬೆ ಕೆಳಗೆ ಸಿಲುಕಿದ್ದ ಗಾಯಾಳುವನ್ನು ತಕ್ಷಣ ಸ್ಥಳೀಯರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ 8 ಹೊಲಿಗೆ ಹಾಕಲಾಯಿತು. ಆ ನಂತರ ತೀವ್ರ ಗಾಯದಿಂದ ಪ್ರಜ್ಞೆ ತಪ್ಪಿದ ಸಂಜೀವರಾಯಪ್ಪ ಮೃತಪಟ್ಟಿದ್ದಾರೆ. ಘಟನೆ ಸ್ಥಳಕ್ಕೆ ನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಶಿವಸ್ವಾಮಿ, ನಗರಸಭಾ ಸದಸ್ಯ ಶ್ರೀನಾಥ್ ಭೇಟಿ ನೀಡಿ ಪರಿಶೀಲಿಸಿದರು. ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆಗೊಂದು ಕವಿಗೋಷ್ಠಿ 29ಕ್ಕೆ
ಚಿಂತಾಮಣಿ: ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಜೂ.29ರ ಬೆಳಿಗ್ಗೆ 11 ಗಂಟೆಗೆ ನಗರದ ಹೊರವಲಯದ ಗೋಪಸಂದ್ರ ಗ್ರಾಮದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಜನಾರ್ಧನ ರೆಡ್ಡಿ ನಿವಾಸದಲ್ಲಿ ಮನೆಗೊಂದು ಕವಿಗೋಷ್ಠಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಚುಸಾಪ ಪ್ರಧಾನ ಕಾರ್ಯದರ್ಶಿ ಶಿ.ಮ. ಮಂಜುನಾಥ ತಿಳಿಸಿದ್ದಾರೆ. ಉಭಯ ಜಿಲ್ಲೆಗಳ ಆಸಕ್ತ ಕವಿಗಳು ಕಲಾವಿದರು, ಸಾಹಿತ್ಯಾಭಿಮಾನಿಗಳು ಸಕಾಲಕ್ಕೆ ಹಾಜರಾಗಿ ಸಹಕರಿಸಬೇಕೆಂದು ಹಾಗೂ ಮಾಹಿತಿಗಾಗಿ ಮೊ.9449466788 ಅಥವಾ 9448760687 ಗೆ ಸಂಪರ್ಕಿಸುವಂತೆ ಅವರು ಕೋರಿದ್ದಾರೆ.
ಗುರುತಿನ ಚೀಟಿ ವಿತರಣೆ
ಚಿಂತಾಮಣಿ: ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟನೆಯಾದ ಸಿರಿಗನ್ನಡ ವೇದಿಕೆ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು. ನಗರದ ಮಹಾತ್ಮ ಗಾಂಧಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ನಡೆದ ವೇದಿಕೆಯ ಮಾಸಿಕ ಸಭೆಯಲ್ಲಿ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷರ ಸಹಿಯನ್ನೊಳಗೊಂಡ ಗುರುತಿನ ಚೀಟಿ ವೇದಿಕೆ ಉಪಾಧ್ಯಕ್ಷ ಸಿ. ವೆಂಕಟರವಣಪ್ಪ ವಿತರಿಸದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ವೇದಿಕೆ ಅಧ್ಯಕ್ಷ ಕೆ.ಎನ್. ಅಕ್ರಂಪಾಷ, ಗೌರವಾಧ್ಯಕ್ಷ ಎಸ್. ವಸಂತ್ ಮಾತನಾಡಿದರು. ಕಾರ್ಯದರ್ಶಿ ಎಸ್.ಸಿ. ಶ್ರೀನಿವಾಸರೆಡ್ಡಿ ಸಹಕಾರ್ಯದರ್ಶಿ ಎನ್. ತ್ಯಾಗರಾಜ್ ಖಜಾಂಚಿ ಕೆ. ಕೃಷ್ಣಪ್ಪ, ರಾಘವೇಂದ್ರ, ಜಿ. ಕೃಷ್ಣಪ್ಪ, ಸತ್ಯಭಾಮ, ಕೆ. ವಾಣಿ ಇದ್ದರು.