ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೀರು ಶುದ್ಧೀಕರಣ ಮಾಡದಿದ್ದರೂ ಗುತ್ತಿಗೆದಾರಗೆ ರು. 15 ಲಕ್ಷ ಸಂದಾಯ

Mainashree
Updated On : 24 Jun 2014, 11:09 am

ಬಾಗೇಪಲ್ಲಿ: ಅನೇಕ ವರ್ಷಗಳಿಂದ ನೀರು ಶುದ್ಧೀಕರಣ ಘಟಕದಲ್ಲಿರುವ ಯಂತ್ರಗಳು ಸಂಪೂರ್ಣವಾಗಿ ತುಕ್ಕು ಹಿಡಿದು ನಿಷ್ಕ್ರಿಯಗೊಂಡಿದ್ದರೂ ಗುತ್ತಿಗೆದಾರರಿಗೆ ಪ್ರತಿ ವರ್ಷವೂ 15 ಲಕ್ಷ ನೀಡಲಾಗುತ್ತಿದೆ ಎಂದು ಪುರಸಭೆಯ ಸದಸ್ಯರು ಮುಖ್ಯಾಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಪುರಸಭೆಯ ಅಧ್ಯಕ್ಷೆ ಎಂ.ಉಷಾರಾಣಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಎ.ನಂಜುಂಡಪ್ಪ, ಆರೀಫ್, ಅಪ್ಪಯ್ಯಬಾಬು ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಉದ್ದೇಶದಿಂದ ಲಕ್ಷಾಂತರ ರು.ಗಳ ವೆಚ್ಚದಲ್ಲಿ ಶುದ್ದೀಕರಣ ಘಟಕವನ್ನು ಸ್ಥಾಪಿಸಲಾಗಿದೆ.
ಆದರೆ ಶುದ್ಧೀಕರಣ ಘಟಕದಲ್ಲಿರುವಂತಹ ಯಂತ್ರೋಪಕರಣಗಳು ಕೆಟ್ಟು ವರ್ಷಗಳೇ ಕಳೆದಿವೆ. ಆದರೂ ಪ್ರತಿ ವರ್ಷ ಶುದ್ದೀಕರಣದ ಹೆಸರಲ್ಲಿ ಲಕ್ಷಾಂತರು ರು, ನೀಡಲಾಗುತ್ತಿದೆ. ಇದರ ಹಿಂದೆ ಲಾಬಿ ನಡೆಯುತ್ತಿದೆ. ಹಣ ಡ್ರಾ ಮಾಡುವುದನ್ನು ನಿಲ್ಲಿಸಬೇಕೆಂದು ಅವರು ಒತ್ತಾಯಿಸಿದರು.
ಅಧಿಕಾರಿ ತಿರಸ್ಕಾರ: ಅದು ಸಾಧ್ಯವಿಲ್ಲ ಎಂದು ಮುಖ್ಯಾಧಿಕಾರಿ ಆರ್ .ಶ್ರೀಕಾಂತ್ ಸಭೆಗೆ ತಿಳಿಸಿದರು.
ಏಕೆ ಆಗುವುದಿಲ್ಲ. ಎಲ್ಲ ಸದಸ್ಯರು ಮಾಡಿದ ತೀರ್ಮಾನವನ್ನು ಸ್ವೀಕರಿಸಬೇಕು. ಇಲ್ಲವಾದರೆ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದಾಗ ಶ್ರೀಕಾಂತ್ ಒಪ್ಪಿದರು.
ನೋಟಿಸ್ ನೀಡಿ: ಪುರಸಭೆ ವತಿಯಿಂದ ಬಾಡಿಗೆ ನೀಡಲಾಗಿರುವ ವಾಣಿಜ್ಯ ಮಳಿಗೆಗಳಿಂದ ಸುಮಾರು 11.25 ಲಕ್ಷ ಬಾಕಿ ಬರಬೇಕಾಗಿದ್ದು ಕೂಡಲೇ ಸಂಬಂಧಿಸಿದವರಿಗೆ ನೋಟಿಸ್ ನೀಡಿ ಬಾಡಿಗೆ ಪಾವತಿಸಲು ಸೂಚಿಸಬೇಕು. ಇಲ್ಲವೇ ಅಂಗಡಿ ಖಾಲಿಮಾಡುವಂತೆ ತಿಳಿಸಬೇಕೆಂದು ಎಂದು ಸದಸ್ಯರು ಒತ್ತಾಯಿಸಿದರು.
ಮುಖ್ಯರಸ್ತೆ ಸೇರಿದಂತೆ ಪಟ್ಟಣದಲ್ಲಿ ಅಳವಡಿಸಲಾಗಿರುವ ಎಲ್‌ಇಡಿ ದೀಪಗಳು ಕೆಟ್ಟು ಅನೇಕ ತಿಂಗಳುಗಳೇ ಕಳೆದುಹೋಗಿವೆ. ದೀಪಗಳನ್ನು ಅಳವಡಿಸಿದ ಏಜೆನ್ಸಿ ವಿರುದ್ದ ಕ್ರಮ ಜರುಗಿಸಿ ಎಂದು ಸದಸ್ಯರು ಒತ್ತಾಯಿಸಿದರು. ಪುರಸಭೆ ಉಪಾಧ್ಯಕ್ಷ ಆ.ನ.ಮೂರ್ತಿ, ಲೆಕ್ಕಾಧಿಕಾರಿ ಶ್ರೀಧರ್, ನಗರ ನೀರು ಸರಬರಾಜು ಮಂಡಳಿ ಎಇ ಚಂದ್ರಶೇಖರ್, ಬೆಸ್ಕಾಂ ಎಇಇ ಬಾಲಾಜಿ ಮುಂತಾದವರು ಸಭೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement