ಮಾಹಿತಿ ಸರಿಯಿಲ್ಲದಿದ್ದರೆ ಕ್ರಮ
ಕೋಲಾರ: ನಿರ್ಮಲ ಭಾರತ ಅಭಿಯಾನದಡಿ ನಡೆದ ಬೇಸ್ಲೈನ್ ಸರ್ವೇ ಹಾಗೂ ಅಗತ್ಯವಿರುವ ಶೌಚಾಲಯಗಳ ಬಗ್ಗೆ ದಾಖಲಿಸಿರುವ ಮಾಹಿತಿ ಸರಿಯಿಲ್ಲದಿದ್ದರೆ ಗ್ರಾಪಂ ಪಿಡಿಒಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿರುವುದರಿಂದ ಲೋಪಕ್ಕೆ ಅವಕಾಶ ನೀಡಬೇಡಿ ಎಂದು ನಿರ್ಮಲ ಭಾರತ ಅಭಿಯಾನದ ಜಿಲ್ಲಾ ಸಮನ್ವಯಾಧಿಕಾರಿ ಮುನಿಸ್ವಾಮಿ ನಾಯ್ಡು ತಿಳಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ರಾಪಂ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಶೇ.28ರಷ್ಟು ಕುಟುಂಬಗಳಲ್ಲಿ ಮಾತ್ರ ಶೌಚಾಲಯವಿದೆ ಎಂಬುದು ಬೇಸ್ ಲೈನ್ ಸರ್ವೇಯಿಂದ ತಿಳಿದುಬಂದಿದೆ. ಆದರೆ ಗ್ರಾಪಂಗಳಲ್ಲಿ ದಾಖಲಿಸಿರುವ ಮಾಹಿತಿ ಪ್ರಕಾರ ಶೇ.18ಕ್ಕೆ ಕುಸಿದಿದೆ. ಅಂದರೆ ಶೇ. 82ರಷ್ಟು ಕುಟುಂಬಗಳಲ್ಲಿ ಶೌಚಾಲಯ ಇಲ್ಲ ಎಂದಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಕಳೆದ ವರ್ಷದ ಅಂಕಿ ಅಂಶಗಳ ಪ್ರಕಾರ ಶೌಚಾಲಯ ರಹಿತ ಕುಟುಂಬದ ಸಂಖ್ಯೆ 34148.ಬೇಸ್ ಲೈನ್ ಸರ್ವೇ ಪ್ರಕಾರ 16867 ಕುಟುಂಬಗಳಲ್ಲಿ ಶೌಚಾಲಯ ಇದೆ ಎಂಬ ಮಾಹಿತಿ ನೀಡಲಾಗಿದ್ದು ಒಂದಕ್ಕೊಂದು ತಾಳೆ ಆಗುತ್ತಿಲ್ಲವೆಂದರು.
ಬೇಸ್ ಲೈನ್ ಸರ್ವೇಯಲ್ಲಿ ಶೌಚಾಲಯ ಇದೆ ಎಂಬ ಮಾಹಿತಿ ಇದ್ದರೆ, ಈಗ ಇಲ್ಲ ಎನ್ನುತ್ತಿರುದರ ಉದ್ದೇಶವೇನು ಎಂದು ಸರ್ಕಾರ ವಿವರಣೆ ಕೇಳಿದೆ. ಲೋಪವೆಸಗಿರುವವರ ವಿರುದ್ಧ ಕ್ರಮಕ್ಕೆ ನಿರ್ದೇಶನ ನೀಡಿದೆ ಎಂದರು. ತಾಲೂಕಿನ 23 ಗ್ರಾಪಂಗಳಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಶೌಚಾಲಯ ನಿರ್ಮಾಣದ ಭೌತಿಕ ಗುರಿಗೆ ಅರಹಳ್ಳಿ, ಬೆಳ್ಳೂರು, ಚನ್ನಸಂದ್ರ, ಹೊನ್ನೇನಹಳ್ಳಿ, ಹರಟಿ., ಹೋಳೂರು, ಹುತ್ತೂರು, ಐತರಾಸನಹಳ್ಳಿ, ಜನ್ನಘಟ್ಟ, ಮದನಹಳ್ಳಿ, ಮಣಿಘಟ್ಟ, ಮಾರ್ಜೇನಹಳ್ಳಿ, ಶಾಪೂರು, ಸೂಲೂರು, ತೊಟ್ಲಿ ಸೇರಿದಂತೆ ಬಹುತೇಕ ಗ್ರಾ.ಪಂಗಳದ್ದು ಶೂನ್ಯ ಸಾಧನೆಯಾಗಿದೆ.
ತಾಲೂಕಿನ 5 ಗ್ರಾ.ಪಂ ಗಳನ್ನು ಘನ ತ್ಯಾಜ್ಯ ವಿಲೇವಾರಿಗೆ ಆಯ್ಕೆ ಮಾಡಿಕೊಳ್ಳಬೇಕಿದೆ. ತ್ಯಾಜ್ಯ ವಿಲೇವಾರಿಗೆ ಅರ್ಧ ಎಕರೆ ಜಾಗ ಬೇಕು. ಕಸ ಸಂಗ್ರಹಕ್ಕೆ ರು. 3.50 ಲಕ್ಷ ವೆಚ್ಚದಲ್ಲಿ ವಾಹನ ಖರೀದಿ ಸೇರಿದಂತೆ ಗ್ರಾ.ಪಂಗೆ ಒಟ್ಟು ರು. 20 ಲಕ್ಷ ಅನುದಾನ ಬರುತ್ತದೆ. ಯಾರು ಆಸಕ್ತಿ ವಹಿಸುತ್ತೀರಿ ಎಂದು ಕೇಳಿದಾಗ ಯಾವೊಬ್ಬ ಪಿಡಿಒಗಳು ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಲಿಲ್ಲ.
ಈ ಹಿಂದೆ ಶೌಚಾಲಯ ನಿರ್ಮಿಸಿಕೊಂಡವರಿಗೆ ಹಣ ಪಾವತಿಸಿಲ್ಲ.ಬಾಕಿ ನೀಡುವವರೆಗೆ ಶೇ. 100ರಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪಿಡಿಒಗಳು ಅಳಲು ತೋಡಿಕೊಂಡರು. ಸರ್ಕಾರದ ನಿರ್ದೇಶನದಂತೆ ನೀರಿನ ಸಮಸ್ಯೆ ಎದುರಿಸುತ್ತಿರುವ ಭಾಗಗಳಲ್ಲಿ ವರ್ಷದಲ್ಲಿ 90 ದಿನ ಮಾತ್ರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅವಕಾಶವಿದೆ. ಹೀಗಾಗಿ ಸಮಸ್ಯಾತ್ಮಕ ಗ್ರಾಮಗಳಲ್ಲಿ ತಕ್ಷಣ ಬೋರ್ವೆಲ್ ಕೊರೆಯಿಸಿ ನೀರು ಸರಬರಾಜಿಗೆ ವ್ಯವಸ್ಥೆ ಮಾಡಬೇಕು. ಕೊರೆಸಿರುವ ಬೋರ್ವೆಲ್ಗಳನ್ನು ಕೆಇಬಿಯಲ್ಲಿ ನೋಂದಣಿ ಮಾಡಿಸುವಂತೆ ಜಿಪಂ ಎಇಇ ಮಂಜುನಾಥ್ ತಿಳಿಸಿದರು. ಉದ್ಯೋಗ ಖಾತ್ರಿ ಯೋಜನೆಯ ಅಧಿಕಾರಿ ರಾಜಣ್ಣ, ತಾಪಂ ಇಒ ಜಾನಕಿರಾಂ, ನಿರ್ಮಲ ಭಾರತ ಅಭಿಯಾನದ ತಾಲೂಕು ಸಂಯೋಜಕ ಜಿ.ಶ್ರೀನಿವಾಸ್ ಸಭೆಯಲ್ಲಿದ್ದರು.