ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸೂರ್ಯ ಸ್ಪರ್ಶ ನಾಡಲ್ಲಿ ಕಸಬ್ ದಾಳಿ!

Mainashree
Updated On : 24 Jun 2014, 11:08 am

 ಪಾ.ಶ್ರೀ.ಅನಂತರಾಮ್
ಕೋಲಾರ: ನಾಡಿನ ಪುರಾಣ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಮುಳಬಾಗಲು ಒಂದು ಕಾಲದಲ್ಲಿ ವಿಜಯನಗರದ ಹೆಬ್ಬಾಗಿಲಾಗಿತ್ತು. ಕರ್ನಾಟಕಕ್ಕೆ ಸೂರ್ಯದ ಸ್ಪರ್ಶ ನೀಡುವ ಮೂಡಣ ಬಾಗಿಲು ಸಹ ಹೌದು. ಆದರೆ, ದೂರದೃಷ್ಟಿಯ ಕೊರತೆ, ಜನಸಂಖ್ಯೆಯ ಸ್ಫೋಟ, ಪರಿಸರದ ವಿಚಾರದಲ್ಲಿ ಜಾಗೃತಿ ಮೂಡದಿರುವುದರಿಂದ ಮುಳಬಾಗಲು ಪಟ್ಟಣದಲ್ಲಿ ಸ್ವಚ್ಛತೆ ಕಗ್ಗಂಟಾಗಿದೆ. ಇಲ್ಲಿಯವರೆಗೆ ಮುಳಬಾಗಲು ಪುರಸಭೆಯ ಸ್ಥಾನ-ಮಾನದಲ್ಲಿ ಸಾಗುತ್ತಿದೆ. ಅತಿ ಶೀಘ್ರವೇ ಮೇಲ್ದರ್ಜೆಗೆ ನಗರಸಭೆ ಮಾನ್ಯತೆ ಪಡೆಯಲಿದೆ. ಪ್ರಸ್ತುತ ಪಟ್ಟಣದಲ್ಲಿ ಸುಮಾರು 21 ಟನ್ ಕಸ ಸಂಗ್ರಹಣೆ ಆಗುತ್ತಿದೆ. ತಾಲೂಕಿನ ಕುರುಡುಮಲೆಗೆ ಹೋಗುವ ಮಾರ್ಗದಲ್ಲಿರುವ ರಚ್ಚಬಂಡ ಹಳ್ಳಿಯ 6 ಎಕರೆ ಜಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಲಾಗಿದೆ. ವೈಜ್ಞಾನಿಕವಾಗಿ ಕಸ ಸಂಸ್ಕರಣೆಗೆ ಕನಿಷ್ಠ 10 ಎಕರೆ ಜಾಗದ ಅವಶ್ಯಕತೆ ಇದೆ.
ನಗರಸಭೆ ಆಧಿಸೂಚನೆಗಾಗಿ ಅಧಿಕಾರಿಗಳು ಮತ್ತು ಹಾಲಿ ಪುರಸಭೆಯ ಆಡಳಿತ ವರ್ಗ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಪ್ರಸ್ತುತ ಪಟ್ಟಣ 27 ವಾರ್ಡುಗಳನ್ನು ಒಳಗೊಂಡಿದೆ. ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರಿಲ್ಲ. 36 ಕಾಯಂ, 32 ಗುತ್ತಿಗೆ ಆಧಾರಿತ ಪೌರ ಕಾರ್ಮಿಕರಿದ್ದರೂ ಕೆಲವರು ಆಗಾಗ ಅನಾರೋಗ್ಯ ಮತ್ತಿತರ ಕಾರಣದಿಂದ ಗೈರು ಹಾಜರಾಗಾತ್ತಾರೆ. ಆರೋಗ್ಯ ನಿರೀಕ್ಷಕರು ಮೂವರು ಇರಬೇಕು. ಈಗ ಒಬ್ಬರಿದ್ದಾರೆ. ಸರ್ಕಾರ 18 ಜನರನ್ನು ನೇಮಿಸಿಕೊಳ್ಳಲು ಅನುಮತಿ ನೀಡಿದೆಯಾದರೂ ಕಸ ಮುಕ್ತ ಪಟ್ಟಣವನ್ನಾಗಿ ಮಾಡಲು ಇದರಿಂದ ಸಾಧ್ಯವಿಲ್ಲ ಅಷ್ಟೇ ಸತ್ಯ!
ಪಟ್ಟಣದ ಜಹಂಗೀರ್ ನಗರ, ಮುತ್ಯಾಲಮ್ಮ ಪೇಟೆ, ಅಂಬೇಡ್ಕರ್ ನಗರ ಸೇರಿದಂತೆ ಅನೇಕ ಕಡೆ 13 ಕಂಟೈನರ್‌ಗಳನ್ನು ಇಡಲಾಗಿತ್ತು. ಜನತೆಯ ಅಸಹಕಾರ, ಪರಿಸರದ ಬಗ್ಗೆ ಅರಿವು ಇಲ್ಲದಿರುವುದು ಹಾಗೂ ಘನತ್ಯಾಜ್ಯ ಘಟಕಕ್ಕೆ ಕಂಟೈನರ್ ಹೊತ್ತು ಹೋಗುವುದಕ್ಕೆ ಅಗತ್ಯವಿರುವಷ್ಟು ಟಿಪ್ಪರ್‌ಗಳು ಇಲ್ಲದ ಕಾರಣ ಸದರಿ ಕಂಟೈನರ್‌ಗಳನ್ನು ತೆರವು ಮಾಡಲಾಗಿದೆ. ಇದರಿಂದ ಮತ್ತಷ್ಟು ಕಸದ ಸಮಸ್ಯೆ ಎದುರಾಗಿದೆ. ಪುರಸಭೆ ಸದಸ್ಯರ ಟೀಕೆ-ಟಿಪ್ಪಣಿಗಳಿಗೆ ಹೆದರಿ ಅಧಿಕಾರಿಗಳು ಇರುವ ವ್ಯವಸ್ಥೆಯಲ್ಲೇ ಕಸವನ್ನು ಪ್ರತಿದಿನವಲ್ಲದಿದ್ದರೂ ವಾರಕ್ಕೆ ಎರಡು ಬಾರಿ ವಿಲೇವಾರಿ ಮಾಡುತ್ತಿದ್ದಾರೆ. ಪ್ರತಿ ಶನಿವಾರ, ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಕಸ ವಿಲೇವಾರಿಗೆ ಕಷ್ಟವಾಗುತ್ತಿದೆ.
18 ಜನರ ನೇಮಕಕ್ಕೆ ಆದೇಶ ಬಂದಿದೆ. ಮುಳಬಾಗಿಲು ಪುರಸಭೆ ನಗರಸಭೆಯಾದಲ್ಲಿ ಕನಿಷ್ಟ 50ರಿಂದ 60 ಮಂದಿ ಜನ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳುವುದಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲು ಅವಕಾಶವಿದೆ. ಘನತ್ಯಾಜ್ಯವನ್ನು ಸಂಸ್ಕರಿಸಲು ಬೇಕಾದ ಘಟಕಕ್ಕೆ ಕನಿಷ್ಟ 2 ರಿಂದ 3 ಕೋಟಿ ಬೇಕಾಗುತ್ತದೆ. ನಗರಸಭೆಯ ಮಾನ್ಯತೆ ಸಿಕ್ಕ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುತ್ತೇವೆ. ಇದರಿಂದ ಪ್ರತಿನಿತ್ಯ ಸಂಗ್ರಹಣೆ ಮಾಡುವ ಕಸದಲ್ಲಿ ಸಿಗುವ ಪ್ಲಾಸ್ಟಿಕ್, ಕಬ್ಬಿಣ ಇತ್ಯಾದಿ ವಸ್ತುಗಳನ್ನು ವಿಂಗಡಣೆ ಮಾಡಿ ಮಾರಾಟ ಮಾಡಿದಲ್ಲಿ ಸಂಸ್ಥೆಗೆ ಹಣ ಸಿಗುತ್ತದೆ. ಜೊತೆಗೆ ಗಟ್ಟಿ ಕಸದಿಂದ ವಾಹನಗಳಿಗೆ ಬಳಕೆ ಮಾಡುವ ಗ್ಯಾಸ್, ಆಯಿಲ್ ಇನ್ನಿತರ ಕಚ್ಚಾ ವಸ್ತುಗಳ ತಯಾರಿಕೆ ಮಾಡುವುದರಿಂದ ಆದಾಯ ಸಿಗುವುದರಿಂದ ಸಂಸ್ಕರಣಾ ಘಟಕ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಟಿ ಅಶೋಕ್‌ಕುಮಾರ್, ಪರಿಸರ ಅಭಿಯಂತರರು, ಪುರಸಭೆ ಮುಖ್ಯಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement