ಅಪರಾಧ ಅಪರಿಮಿತ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬುಧವಾರ ಅಕ್ಷರಶಃ 'ಅಪರಾಧಗಳ ದಿನ'ವಾಗಿ ಪರಿಣಮಿಸಿತು. ಗುಂಪು ಘರ್ಷಣೆ, ಮಕ್ಕಳನ್ನು ಕೊಂದು ನೇಣು ಹಾಕಿಕೊಂಡ ಅಪ್ಪ, ಟ್ರಾಕ್ಟರ್ಗೆ ಸಿಲುಕಿ ವಿದ್ಯಾರ್ಥಿನಿ ಸಾವು, ಹಲ್ಲೆಗೆ ಬೇಸತ್ತು ಅರ್ಚಕ ಕುಟುಂಬ ಆತ್ಮಹತ್ಯೆಗೆ ಮುಂದಾಗಿರುವುದು... ಹೀಗೆ ನಾನಾ ಅಪರಾಧ ಪ್ರಕರಣಗಳು ಘಟಿಸಿವೆ.
ಇಬ್ಬರು ಮಕ್ಕಳಿಗೆ ನೇಣು ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡ
ಗೌರಿಬಿದನೂರು: ಹೆಂಡತಿ ತವರುಮನೆಗೆ ಹೋದಳೆಂದು ಬೇಸತ್ತ ಗಂಡ ಇಬ್ಬರು ಮಕ್ಕಳಿಗೆ ನೇಣುಹಾಕಿ ನಂತರ ತಾನೂ ನೇಣಿಗೆ ಶರಣಾದ ಘಟನೆ ಗೌರಿಬಿದನೂರು ತಾಲೂಕು ತೊಂಡೇಭಾವಿ ಹೋಬಳಿ ಕಲಿನಾಯಕನಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಶಾಂತರಾಜು(32), ಅನುಭವ್(6), ಪ್ರಭು(4) ಆತ್ಮಹತ್ಯೆ ಮಾಡಿಕೊಂಡವರು. ಮಂಚೇನಹಳ್ಳಿ ಠಾಣೆ ಪಿಎಸ್ ಐ ಸುಂದರ್ ಅವರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.
ಘಟನೆಯ ಹಿನ್ನಲೆ: ಬುಧವಾರ ಬೆಳಿಗ್ಗೆ ಅಡುಗೆ ಮಾಡುವ ವಿಷಯದಲ್ಲಿ ಗಂಡ ಶಾಂತರಾಜು ಮತ್ತು ಹೆಂಡತಿ ರಮ್ಯಾ ನಡುವೆ ಜಗಳವಾಗಿದೆ ಜಗಳದಿಂದ ಬೇಸತ್ತ ಹೆಂಡತಿ ರಮ್ಯ ತವರುಮನೆ ಬೆಂಗಳೂರಿಗೆ ಹೊರಟು ಹೋಗಿದ್ದಾಳೆ. ಇದರಿಂದ ತೀವ್ರ ನೊಂದ ಶಾಂತರಾಜು ಮೊದಲು ತನ್ನ ಮಕ್ಕಳಿಗೆ ಮನೆಯಲ್ಲಿಯೇ ನೇಣುಹಾಕಿ ನಂತರ ತಾನೂ ನೇಣಿಗೆ ಶರಣಾಗಿದ್ದಾನೆನ್ನಲಾಗಿದ್ದು, 8 ವರ್ಷಗಳಹಿಂದೆ ಇಬ್ಬರಿಗೂ ವಿವಾಹವಾಗಿತ್ತು ಎನ್ನಲಾಗಿದೆ.
ಎದೆ ನೋವಿನಿಂದ ಮೃತಪಟ್ಟ ಕೈದಿ
ಕೆಜಿಎಫ್: ನಗರದ ಚಾಂಪಿಯನ್ ರೀಫ್ ವ್ಯಾಪ್ತಿಯಲ್ಲಿರುವ ವಿಶೇಷ ಉಪಕಾರಾಗೃಹದಲ್ಲಿದ್ದ ವಿಚಾರಾಣಾಧೀನ ಕೈದಿಯೊಬ್ಬನು ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಬಂಗಾರಪೇಟೆ ತಾಲ್ಲೂಕಿನ ಕೊಂಗರಹಳ್ಳಿ ಗ್ರಾಮದ ನಿವಾಸಿ ಬ್ರಹ್ಮಚಾರ(35) ಎಂಬುವರು ಮೃತಪಟ್ಟಿರುವ ಕೈದಿಯಾಗಿದ್ದು, ಈತನು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಮಾರ್ಚ್ 20 ರಂದು ವಿಚಾರಾಣಾಧೀನ ಕೈದಿಯಾಗಿ ಜೈಲು ಸೇರಿದ್ದ ಎನ್ನಲಾಗಿದೆ. ಜೈಲಿನಲ್ಲಿ ಅಡುಗೆ ಮಾಡಿಕೊಂಡಿದ್ದ ಈತನಿಗೆ ಕಳೆದ ಎರಡು ದಿನಗಳ ಹಿಂದೆ ಎದೆನೋವು ಕಾಣಿಸಿಕೊಂಡಿದ್ದು ಉಪಕಾರಾಗೃಹದಿಂದ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿತ್ತು.
ಬುಧವಾರ ಬೆಳಗ್ಗೆ 5 ಗಂಟೆಯಲ್ಲಿ ಎದ್ದು ಬ್ರಹ್ಮಚಾರ ಅಡುಗೆ ಮಾಡಲು ಹೋದ ಸಮಯದಲ್ಲಿ ವಾಂತಿ ಮಾಡಿಕೊಂಡು ಕುಸಿದು ಬಿದ್ದು ಅಸ್ವಸ್ಥನಾದ ಕೂಡಲೇ ಜೈಲಿನ ಸಿಬ್ಬಂದಿ 108 ತುರ್ತು ಕರೆಸಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೈದಿ ಬ್ರಹ್ಮಚಾರ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮಾಹಿತಿಯನ್ನು ಪಡೆದಿದ್ದಾರೆ.
ಟ್ರ್ಯಾಕ್ಟರ್ ಹಿಂಬದಿ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿನಿ ಸಾವು
ಚಿಂತಾಮಣಿ: ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿನಿ ಟ್ರ್ಯಾಕ್ಟರ್ನ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಊಲವಾಡಿ ಗ್ರಾಮದ ಹೊರವಲಯದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ತಾಲೂಕಿನ ಊಲವಾಡಿ ಗ್ರಾಮದ ರವಿ ಮತ್ತು ಮಂಜುಳಮ್ಮ ದಂಪತಿ ಪುತ್ರಿ ಪ್ರಿಯಾಂಕ (13) ಬೂರಗಮಾಕಲಹಳ್ಳಿ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎಂದಿನಂತೆ ಬೆಳಗ್ಗೆ ಶಾಲೆಗೆ ಹೋಗಲು ಸಮಯಕ್ಕೆ ಸರಿಯಾಗಿ ಬಸ್ ಬಾರದ ಹಿನ್ನೆಲೆಯಲ್ಲಿ ಆತುರದಲ್ಲೇ ಸಹಪಾಠಿಗಳೊಂದಿಗೆ ಟ್ರ್ಯಾಕ್ಟರ್ನಲ್ಲಿ ಕುಳಿತುಕೊಂಡು ಹೋಗುತ್ತಿದ್ದಳು. ಆಕಸ್ಮಿಕವಾಗಿ ಕೈಯಲ್ಲಿದ್ದ ಪುಸ್ತಕಗಳ ಬ್ಯಾಗ್ ಟ್ರ್ಯಾಕ್ಟರ್ ಹಿಂಬದಿ ಬಿದ್ದಾಗ ಅದನ್ನು ತೆಗೆದುಕೊಳ್ಳಲು ಹೋಗಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾಳೆ.
ಮುಗಿಲು ಮುಟ್ಟಿದ ಆಕ್ರಂದನ: ಊಲವಾಡಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಬಡ ಕೂಲಿ ಕಾರ್ಮಿಕ ರವಿ ಹಾಗೂ ಮಂಜುಳಮ್ಮ ದಂಪತಿಗೆ ಆರು ಜನ ಹೆಣ್ಣು ಮಕ್ಕಳು. ಪ್ರಿಯಾಂಕ ಮೊದಲನೇಯವಳು. ಮಗಳ ಸಾವಿನ ಸುದ್ದಿ ಕೇಳಿದ ತಕ್ಷಣ ಮೃತರ ಸಂಬಂಧಿಕರ ಆಕ್ರಂದನ ಆಸ್ಪತ್ರೆ ಆವರಣದಲ್ಲಿ ಮುಗಿಲು ಮುಟ್ಟಿತ್ತು.
ಸುದ್ದಿ ತಿಳಿದ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸಣ್ಣತಿಮ್ಮಪ್ಪ ಸ್ಥಳ ಪರೀಕ್ಷಿಸಿ ಟ್ರ್ಯಾಕ್ಟರ್ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ವರದಕ್ಷಿಣೆ ನೆಪದಲ್ಲಿ ವಂಚಿಸಿದ್ದ ಪ್ರೇಮಿ ಹಿರಿಯರ ಸಮ್ಮುಖದಲ್ಲಿ ಕೈ ಹಿಡಿದ!
ಚಿಂತಾಮಣಿ: ಪ್ರೀತಿಯ ನೆಪದಲ್ಲಿ ಗರ್ಭಿಣಿ ಮಾಡಿ ಕೈ ಕೊಟ್ಟಿದ್ದ ಪ್ರೇಮಿಗೆ ಪ್ರೇಯಸಿಯ ಸಂಬಂಧಿಕರು ಗೂಸಾ ನೀಡಿದ್ದಲ್ಲದೇ ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಸಿದ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬೂರಗಮಾಕಲಹಳ್ಳಿ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಅಂಬಾಜಿದುರ್ಗ ಹೋಬಳಿಯ ಕತ್ತರಿಗುಪ್ಪೆ ಗ್ರಾಮದ ವೆಂಕಟಸ್ವಾಮಿ ಪುತ್ರಿ ಸೌಂದರ್ಯ (ಹೆಸರು ಬದಲಾಯಿಸಲಾಗಿದೆ) ಯುವತಿಯನ್ನು ಚಿಕ್ಕಬಳ್ಳಾಪುರ ತಾಲೂಕಿನ ಗುಂತಪ್ಪನಹಳ್ಳಿ ಗ್ರಾಮದ ಗಂಗಲಪ್ಪ ಎಂಬವರ ಪುತ್ರ ಮಂಜುನಾಥ ಪ್ರೀತಿಸುತ್ತಿದ್ದ. ಸಂಬಂಧಿಗಳಾಗಿದ್ದರಿಂದ ಆಗಾಗ ಊರಿಗೆ ಬಂದು ಹೋಗುತ್ತಿದ್ದ. ಪ್ರೀತಿ-ಪ್ರೇಮದ ನೆಪದಲ್ಲಿ ಮೈ ಮರೆತಾಗ ಸೌಂದರ್ಯ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ.
ಸುದ್ದಿ ತಿಳಿದು ಆಘಾತಕ್ಕೆ ಒಳಗಾದ ಯುವತಿಯ ಪೋಷಕರು ಹಾಗೂ ಸಂಬಂಧಿಕರು ಸುದ್ದಿ ಗೌಪ್ಯವಾಗಿ ಇಡಲು ಸಾಧ್ಯವಾಗದೆ ಗ್ರಾಮದ ಹಿರಿಯರ ಗಮನಕ್ಕೆ ತಂದಿದ್ದಾರೆ. ಆಗ ಮಂಜುನಾಥ ಹಾಗೂ ತಂದೆ ಗಂಗುಲಪ್ಪನನ್ನು ನ್ಯಾಯ ಪಂಚಾಯಿತಿಗೆ ಕರೆಯಲಾಗಿದೆ. ಆದರೆ, ವರದಕ್ಷಿಣೆ ಆಸೆಯಿಂದ ಗಂಗುಲಪ್ಪ ತನ್ನ ಮಗ ತಪ್ಪೆ ಮಾಡದ ಅಮಾಯಕ ಎಂದು ಗಟ್ಟಿ ಧ್ವನಿಯಲ್ಲಿ ಕೂಗಾಡಿ ಕಿರುಚಾಡಿದ್ದಾನೆ. ಮೋಸ ಹೋದ ಹುಡುಗಿ ಕಡೆಯ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶಗೊಂಡು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಡ್ಡ ಬಂದ ತಂದೆ ಗಂಗುಲಪ್ಪನಿಗೂ ಹೊಡೆದಿದ್ದಾರೆ.
ಯುವಕ ಮಂಜುನಾಥ ಅವರ ತಂದೆ ಗಂಗುಲಪ್ಪ ತನ್ನ ಮಗ ಸೌಂದರ್ಯ ಜೊತೆ ಮದುವೆಯಾಗಬೇಕಾದರೆ ಚಿನ್ನ, ನಗದು ಹಣ ಹಾಗೂ ದ್ವಿಚಕ್ರ ವಾಹನ ನೀಡಬೇಕೆಂದು ಡಿಮ್ಯಾಂಡ್ ಮಾಡಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಗ್ರಾಮದ ಹಿರಿಯರು ಗಂಗುಲಪ್ಪನಿಗೆ ಛೀಮಾರಿ ಹಾಕಿ ನಂತರ ಮೋಸ ಮಾಡಿದ ಮಂಜುನಾಥ ಹಾಗೂ ತಮ್ಮ ಮೇಲೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಸಂಧಾನ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದೆ.
ಗುಂಪು ಘರ್ಷಣೆ: ನಾಲ್ವರಿಗೆ ಚಾಕುವಿನಿಂದ ಇರಿತ
ಕೆಜಿಎಫ್: ಹಳೇ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪಿನ ನಡುವೆ ನಡೆದ ಘರ್ಷಣೆಯಲ್ಲಿ ನಾಲ್ವರಿಗೆ ಚಾಕುವಿನಿಂದ ಇರಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಆಂಡ್ರಸನ್ಪೇಟೆ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ. ಎರಡನೇ ಬ್ಲಾಕ್ ನಿವಾಸಿಗಳಾದ ಸಂತೋಷ್(25) ಮತ್ತು ತಮ್ಮನಾದ ಅಜೀತ್ಕುಮಾರ್(19) ಎಂಬುವರಿಗೂ ಮತ್ತು ಅದೇ ಬಡಾವಣೆ ನಿವಾಸಿಗಳಾದ ಮದನ್(25), ಅಪ್ಪು(23), ಸುರೇಶ್(22) ಎಂಬುವರ ಮಧ್ಯೆ ಹಳೇ ದ್ವೇಷದ ಹಿನ್ನಲೆಯಲ್ಲಿ ಎರಡು ಗಂಪಿನವರು ಹೊಡೆದಾಡಿಕೊಂಡಿದ್ದಾರೆ. ಅದರಲ್ಲಿ ಸಂತೋಷ್ ಹಾಗೂ ಅಜೀತ್ಕುಮಾರ್ ತಲೆಗೆ ಮರದ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದು, ಅದೇ ರೀತಿ ಸಂತೋಷ್ ಕಡೆಯವರು ಮದನ್, ಅಪ್ಪು ಹಾಗೂ ಸುರೇಶ್ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಎಲ್ಲರು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್.ಎಸ್.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊಬೈಲ್ ಟವರ್ ಕೇಂದ್ರದಲ್ಲಿ ಸಂತೋಷ್ ಹಾಗೂ ಆತನ ಸಹಚರರು ರಾತ್ರಿ ವೇಳೆ ಕಳವು ಮಾಡಲು ಯತ್ನಿಸಿದ್ದರಿಂದ ಅಲ್ಲೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮದನ್, ಅಪ್ಪು ಹಾಗೂ ಸುರೇಶ್ ಎಂಬುವರ ಮಧ್ಯೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸ್ಥಳಕ್ಕೆ ಇನ್ಸ್ಪೆಕ್ಟರ್ ಲಕ್ಷ್ಮೀನಾರಾಯಣ, ಆಂಡ್ರಸನ್ಪೇಟೆ ಠಾಣಾ ಪಿಎಸ್ಐ ಆಂಜಪ್ಪ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಎರಡು ಗುಂಪಿನವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಚಿತ್ರ25 ಕೆಜಿಎಫ್ 3 ಹಲ್ಲೆಗೊಳಗಾಗ ಅಜೀತ್ಕುಮಾರ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.
ಹಲ್ಲೆಗೆ ಬೇಸತ್ತ ಅರ್ಚಕರ ಕುಟುಂಬ ಆತ್ಮಹತ್ಯೆಗೆ ಯತ್ನ
ಮುಳಬಾಗಲು: ತಾಲೂಕಿನ ನಾಗಸಂದ್ರ ಗ್ರಾಮದಲ್ಲಿ ಬುಧವಾರ ಗ್ರಾಮದ ಗುಂಪೊಂದು ವೇಣುಗೋಪಾಲಸ್ವಾಮಿ ದೇವಾಲಯದ ಪುನರ್ ನಿರ್ಮಾಣದ ವಿಷಯದಲ್ಲಿ ಅರ್ಚಕರ ಕುಟುಂಬದ ಮೇಲೆ ಬುಧವಾರ ಬೆಳಿಗ್ಗೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಬೇಸತ್ತ ಅರ್ಚಕ ಕೃಷ್ಣಮೂರ್ತಿ( 50), ಪತ್ನಿ ವರಲಕ್ಷ್ಮಮ್ಮ( 45) ಮತ್ತು ಮಗಳು ಸರಸ್ಪತಿ( 25) ವಿಷ ಸೇವಿಸಿ ಆತ್ಯಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲುಸಲಾಗಿದೆ. ಮುಳಬಾಗಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಈ ಮೂವರನ್ನೂ ಚಿಕಿತ್ಸೆ ಫಲಕಾರಿಯಾಗದೇ ಕೋಲಾರ ಎಸ್ಎನ್ಆರ್ ಅಸ್ಪತ್ರೆಗೆ ಸೇರಿಸಲಾಗಿದೆ.
ಮನೆ ಕಟ್ಟಿ ಕೊಡಿ: ದೇವಾಲಯ ಪುನರ್ ನಿರ್ಮಾಣದ ಸಲುವಾಗಿ ಮನೆ ಬಿಡಲು ಗ್ರಾಮದ ಗುಂಪೊಂದು ತಗಾದೆ ಮಾಡಿದೆ. ಆದರೆ ಮನೆ ತಮಗೆ ಸೇರಿದ್ದು ದೇವಾಲಯ ನಿರ್ಮಾಣದ ನಂತರ ತಮಗೆ ನೆಲೆಸಲು ಮನೆ ನಿರ್ಮಿಸಿಕೊಟ್ಚರೇ ಮನೆ ಬಿಡುವುದಾಗಿ ಅರ್ಚಕರ ಕುಟುಂಬ ತಿಳಿಸಿದೆ. ದೇವಾಲಯಕ್ಕೆ ಸೇರಿದೆಯೆಂದು ಹೇಳಲಾದ ಜಮೀನಿನ ಖಾತೆ ತಮ್ಮ ಹೆಸರಿನಲ್ಲಿದ್ದು ದೇವಾಲಯ ಪುನರ್ ನಿರ್ಮಾಣಕ್ಕೆ ತಮ್ಮ ಸಹಕಾರವಿದೆ ಎಂದು ಅರ್ಚಕರು ತಿಳಿಸಿದ್ದಾರೆ. ಆದರೆ ಮನೆ ನಿರ್ಮಿಸಿಕೊಟ್ಟರೇ ಮನೆ ಬಿಡುವುದಾಗಿ ತಿಳಿಸಿದ ಅರ್ಚಕರ ವಾದವನ್ನು ಒಪ್ಪದ ಗ್ರಾಮದ ಗುಂಪೊಂದು ಸದರಿ ಜಮೀನು ದೇವಾಲಯದ್ದೆಂದು ಅರ್ಚಕರ ಕುಟುಂಬ ಸದಸ್ಯರ ಮೇಲೆ ಏಕಾಕಿ ದಾಳಿ ನಡೆಸಿದೆ. ಇದರಿಂದ ಮನನೊಂದ ಅರ್ಚಕರ ಕುಟುಂಬ ವಿಷಸೇವನೆ ಮಾಡಿದೆ ಎನ್ನಲಾಗಿದೆ. ಮುಳಬಾಗಲು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಜಮೀನು ವಿವಾದ: ತಾಯಿ,ಮಗಳು ಆತ್ಮಹತ್ಯೆಗೆ ಯತ್ನ
ಕೋಲಾರ: ಜಮೀನು ವಿವಾದದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಕಿರುಕುಳ ತಾಳಲಾರದೆ ತಾಯಿ ಹಾಗೂ ಮಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಳಬಾಗಿಲು ತಾಲೂಕಿನ ನಾಗಸಂದ್ರ ಗ್ರಾಮದಲ್ಲಿ ಜರುಗಿದೆ. ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯದ ಅರ್ಚಕರಾದ ಕೃಷ್ಣಮೂರ್ತಿ ಎಂಬುವರ ಸ್ವಾಧೀನದಲ್ಲಿದ್ದ ಜಮೀನು ಹಾಗೂ ಮನೆಯನ್ನು ಬಿಟ್ಟುಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದರು ಎನ್ನಲಾಗಿದೆ.
ಆದರೆ ಅರ್ಚಕ ಕೃಷ್ಣಮೂರ್ತಿ ಹಾಗೂ ಕುಟುಂಬದವರು, ಜಮೀನು ತಮ್ಮದಾಗಿದ್ದರಿಂದ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಅನೇಕ ಬಾರಿ ಜಗಳಗಳು ನಡೆದಿತ್ತು. ಕೆಲವು ಗ್ರಾಮಸ್ಥರು ಏಕಾಏಕಿ ದೇವಾಲಯಕ್ಕೆ ಕಾಂಪೌಂಡ್ ಮಾಡಬೇಕೆಂದು ಜಮೀನು ಹದಗೊಳಿಸಲು ಮುಂದಾಗಿದ್ದರಿಂದ ಮನನೊಂದ ಅರ್ಚಕರ ಪತ್ನಿ ವರಲಕ್ಷ್ಮಮ್ಮ ಹಾಗೂ ಮಗಳು ಸರಸ್ವತಮ್ಮ ರಾಸಾಯನಿಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಮುಳಬಾಗಿಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಅರ್ಚಕರ ಕುಟುಂಬದವರು ಅಭಿವೃದ್ಧಿ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ. ಕೇಳಲು ಹೋದರೆ ಜಗಳ ಮಾಡಿ ವಿಷ ಕುಡಿಯಲು ಮುಂದಾಗಿದ್ದಾರೆ. ಆದರೂ ನಾವು ಅವರನ್ನು ರಕ್ಷಿಸಿದ್ದೇವೆ ಎಂದು ಗ್ರಾಮಸ್ಥ ಅಮರನಾರಾಯಣ ತಿಳಿಸುತ್ತಾರೆ.