ಈ ಶಾಲೆಯಲ್ಲಿ ಮಕ್ಕಳಿಗೆ ಆಯಾ ಕೆಲಸ!
ಬಂಗಾರಪೇಟೆ: ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಅವರು ಓದಿ ಬುದ್ದಿವಂತರಾಗಿ ಮುಂದೆ ಸಮಾಜದ ಸತ್ಪ್ರಜೆಗಳಾಗಿ ಬಾಳಲಿ ಎಂಬ ಆಕಾಂಕ್ಷೆಯಿಂದ. ಆದರೆ ಮಕ್ಕಳು ಶಾಲೆಗಳಲ್ಲಿ ಓದುವುದಕ್ಕಿಂತಲೂ ಶಾಲೆ ಸುತ್ತಲೂ ಕಸ ಕಡ್ಡಿಗಳನ್ನು ಸ್ವಚ್ಛ ಮಾಡುವಂತಾದರೆ....
ತಾಲೂಕಿನ ದೋಣಿಮಡಗು ಪಂಚಾಯ್ತಿ ವ್ಯಾಪ್ತಿಯ ಪೊಲೇನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮಕ್ಕಳಿಗೆ ಪ್ರತಿ ನಿತ್ಯ ಶಾಲೆಯೊಳಗೆ ಹಾಗೂ ಹೊರಗಡೆ ತುಂಬಿರುವ ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸುವ ಶಿಕ್ಷೆಯನ್ನು ಶಿಕ್ಷಕಿಯರು ನೀಡಿದ್ದಾರೆ. ಮಕ್ಕಳು ಶಾಲೆಯಲ್ಲಿ ತಪ್ಪು ಮಾಡಿದ್ದರಿಂದಾಗಿ ಈ ಶಿಕ್ಷೆ ವಿಧಿಸಿಲ್ಲ. ಬದಲಾಗಿ ಶಾಲೆಯಲ್ಲಿ ಆಯಾಗಳಿಲ್ಲದ ಕಾರಣ ಅವರ ಕೆಲಸವನ್ನು ಮಕ್ಕಳಿಂದ ಮಾಡಿಸಲಾಗುತ್ತಿದೆ.
ಸೌಲಭ್ಯಗಳೇ ಇಲ್ಲ: ಗಡಿ ಪ್ರದೇಶಗಳಲ್ಲಿರುವ ಎಲ್ಲಾ ಶಾಲೆಗಳಲ್ಲಿ ಇಂತಹ ಶಿಕ್ಷೆ ಮಕ್ಕಳಿಗೆ ತಪ್ಪಿಲ್ಲ. ಒಂದಲ್ಲಾ ಒಂದು ಕಾರಣದಿಂದ ಈ ಮಕ್ಕಳು ಶೋಷಣೆಗೆ ಒಳಗಾಗುವರು. ಪಟ್ಟಣ ಹಾಗೂ ಸುತ್ತಮುತ್ತಲಿರುವ ಸರ್ಕಾರಿ ಶಾಲೆಗಳಲ್ಲೇ ಮೂಲಭೂತ ಸೌಲಭ್ಯಗಳಿರುವುದಿಲ್ಲ. ಪೊಲೇನಹಳ್ಳಿ ಗ್ರಾಮದ ಶಾಲೆಯ ಮಾಳಿಗೆ ಮಳೆ ಬಂದರೆ ಸೋರುತ್ತದೆ. ಮಕ್ಕಳು ಕೂರಲು ಬೆಂಚುಗಳಿಲ್ಲದೆ ನೆಲದ ಮೇಲೆ ಕೂತುಕೊಂಡೆ ಪಾಠಗಳನ್ನು ಕೇಳಬೇಕು.
ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ 50 ಇದ್ದರೂ ಶಿಕ್ಷಕರು ಮಾತ್ರ ಕೇವಲ ಒಬ್ಬರೆ ಇದ್ದಾರೆ. ಈ ಶಾಲೆಗೆ ಇಬ್ಬರು ಶಿಕ್ಷಕರಿರಬೇಕು. ಈ ಶಾಲೆ ಗಡಿ ಭಾಗದಲ್ಲಿರುವುದರಿಂದ ಶಿಕ್ಷಕರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಬಂದರೂ ವರ್ಷದಲ್ಲೇ ವರ್ಗಾಯಿಸಿಕೊಂಡು ಹೋಗುತ್ತಾರೆ. ಒಂದರಿಂದ ಐದನೆ ತರಗತಿವರೆಗೂ ಮಕ್ಕಳನ್ನು ದಾಖಲಿಸಿಕೊಂಡರೂ ಶಿಕ್ಷಕರ ಕೊರತೆಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಬೇರೇಡೆ ದಾಖಲಿಸುವಂತಾಗಿದೆ. ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೊಲೇನಹಳ್ಳಿ ಶಾಲೆಯಲ್ಲಿ ಮಕ್ಕಳಿಂದ ಕಸ ಗೂಡಿಸುವ ಶಿಕ್ಷಕರ ಕ್ರಮಕ್ಕೆ ಪ್ರತಿ ಕ್ರಮಕೈಗೊಂಡು ಮತ್ತೊಬ್ಬ ಶಿಕ್ಷಕರನ್ನು ನೇಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.