ಕೆಜಿಎಫ್ ನಗರಸಭೆಗೆ 25 ಲಕ್ಷ ಉಳಿತಾಯ ಬಜೆಟ್
ಕೆಜಿಎಫ್: ಇಲ್ಲಿಯ ನಗರಸಭೆ 2014-15 ನೇ ಸಾಲಿನ ಆಯವ್ಯಯವನ್ನು ಅಧ್ಯಕ್ಷ ಎಂ.ಭಕ್ತವತ್ಸಲಂ ಮಂಡಿಸಿದ್ದು, ನಗರಸಭೆಗೆ ಒಟ್ಟು ಆದಾಯ ರು. 54,73,13,804 ಬಂದರೆ ಅದರಲ್ಲಿ 54,47,85,291 ಖರ್ಚು ವೆಚ್ಚಗಳು ಹೋಗಿ 25,28,513 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.
ಸಭೆಯಲ್ಲಿ ಮಾತನಾಡಿದ ಸದಸ್ಯ ಕೆ.ಸಿ.ಮುರಳೀ, ಬೀದಿ ವ್ಯಾಪಾರಿಗಳಿಗಾಗಿ ತಾತ್ಕಾಲಿಕ ಮಳಿಗೆ ನಿರ್ಮಿಸಿದರೆ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳ ಓಡಾಟಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯಿದ್ದು ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದರು.
ಮೈದಾನ ಅಭಿವೃದ್ಧಿಪಡಿಸಿ: ಲಾರೆನ್ಸ್ ಮಾತನಾಡಿ, ನಗರಸಭೆ ವ್ಯಾಪ್ತಿಯ ಆಟದ ಮೈದಾನ ಅಭಿವೃದ್ಧಿಗಾಗಿ ಅಲ್ಲಲ್ಲಿ ಲಕ್ಷಾಂತರ ವೆಚ್ಚ ಮಾಡುವ ಬದಲು ನಗರಸಭೆ ಆಟದ ಮೈದಾನವನ್ನು ಹೆಚ್ಚಿನ ಅಭಿವೃದ್ಧಿ ಮಾಡಲು ಮುಂದಾಗುವುದರಿಂದ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಸರ್ಕಾರಿ ಕಾಂಪೌಂಡ್ ಗೋಡೆಗಳ ಮೇಲೆ ಬಣ್ಣ ಹಾಗೂ ಚಿತ್ರಗಳನ್ನು ಬಿಡಿಸಲು ಬಜೆಟ್ನಲ್ಲಿ 10 ಲಕ್ಷ ಮಂಡಿಸಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ರಮೇಶ್, ಬೆಂಗಳೂರು ಮಹನಗರ ಪಾಲಿಕೆ ಸೇರಿದಂತೆ ಹುಬ್ಬಳ್ಳಿ, ಮಂಗಳೂರು ಮುಂತಾದ ಜಿಲ್ಲೆಗಳಲ್ಲಿ ಇದು ಬಹುತೇಕ ವಿಫಲವಾಗಿದೆ. ಈ ಹಣವನ್ನು ನಗರದ ಅಭಿವೃದ್ಧಿಗೆ ಬಳಸುವುದು ಸೂಕ್ತ ಎಂದರು.
ಬಜೆಟ್ ಮಂಡನೆ: ಉಳಿದಂತೆ ಬೀದಿ ದೀಪಗಳು ಹಾಗೂ ಪಾದಚಾರಿ ರಸ್ತೆ ನಿರ್ಮಾಣಕ್ಕೆ 3 ಕೋಟಿ, ಸುಬಾಷ್ಚಂದ್ರ ಬೋಸ್ ಉದ್ಯಾನವನ ಹಿಂಭಾಗದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ 3 ಕೋಟಿ, ಉದ್ಯಾನವನಗಳಲ್ಲಿ ಮನರಂಜನಾ ಭವನ ನಿರ್ಮಾಣಕ್ಕೆ 50 ಲಕ್ಷ, ಹಾಲಿ ಇರುವ ಖಸಾಯಿ ಖಾನೆಗಳಲ್ಲಿ ಮಾದರಿ ಮಾಂಸದ ಮಳಿಗೆ ನಿರ್ಮಾಣಕ್ಕೆ 2 ಕೋಟಿ, ತರಕಾರಿ ಮತ್ತು ಹಣ್ಣಿನ ಮಳಿಗೆ ಮೇಲೆ ಶಾಪಿಂಗ್ ಮಾಲ್ ನಿರ್ಮಾಣಕ್ಕೆ 2 ಕೋಟಿ, ಕಸದ ಕಂಟೈನರ್ಗೆ 30 ಲಕ್ಷ ಸೇರಿದಂತೆ ಅಭಿವೃದ್ಧಿ ಕಾಮಗಾರಿ ಯೋಜನೆಗೆ ಅಧ್ಯಕ್ಷ ಎಂ.ಭಕ್ತವತ್ಸಲಂ ಬಜೆಟ್ ಮಂಡಿಸಿದರು.
ಈ ವೇಳೆ ಪೌರಾಯುಕ್ತ ವಿ.ಬಾಲಚಂದ್ರ, ವ್ಯವಸ್ಥಾಪಕ ನಂಜುಂಡಸ್ವಾಮಿ, ಆರೋಗ್ಯಾಧಿಕಾರಿ ಸರಸ್ವತಿ, ಅಖಿಲಾಬಾನು, ಎಇಇ ಶೀಧರ್, ನಗರಸಭೆ ಉಪಾಧ್ಯಕ್ಷ ದಾಸ್ ಚಿನ್ನಸವರಿ ಸೇರಿದಂತೆ ಸದಸ್ಯರುಗಳು ಪೊಲೀಸ್ ಅಧಿಕಾರಿಗಳು ಹಾಜರಿದ್ದರು.