ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೇಡಿಕೆ ಈಡೇರಿಕೆಗೆ ಮಹಿಳಾ ಸಂಘಟನೆ ಪ್ರತಿಭಟನೆ

Vishwanath S
Updated On : 26 Jun 2014, 1:28 am

ಬಂಗಾರಪೇಟೆ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರ ಬುಧವಾರ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಮಾಡಿ ನಂತರ ತಾಪಂ ಕಚೇರಿಗೆ ಮುತ್ತಿಗೆ ಹಾಕಿದರು.
ಪಟ್ಟಣದ ಬಯಲು ರಂಗಮಂದಿರಲ್ಲಿ ಜಮಾಯಿಸಿದ ಜನವಾದಿ ಮಹಿಳಾ ಸಂಘಟನೆಯ ಸಾವಿರಾರು ಕಾರ್ಯಕರ್ತರು ತಮಗೆ ದಕ್ಕಬೇಕಾದ ಸರ್ಕಾರಿ ಸೌಲತ್ತುಗಳನ್ನು ಒದುಗಿಸುವಂತೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷೆ ವಿ.ಗೀತಾ, ಸ್ತ್ರೀ ಶಕ್ತಿ ಸಂಘಗಳಿಗೆ 10 ಲಕ್ಷ ರು.ಗಳ ವರೆಗೆ ಸಾಲ ನೀಡಬೇಕು, 25 ಸಾವಿರ ರೂಗಳ ಸುತ್ತು ನಿಧಿ ನೀಡಬೇಕು, ಪ್ರತಿ ಕುಟುಂಬಕ್ಕೂ ಶೌಚಾಲಗಳನ್ನು ನಿರ್ಮಿಸಿಕೊಡಬೇಕು ಎಂಬುದು ಸೇರಿದಂತೆ ಇತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಮಹಿಳೆಯರು ಪೊಲೀಸ್ ಠಾಣೆಗೆ ಬಂದಾಗ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೌಜನ್ಯವಾಗಿ ನಡೆದುಕೊಳ್ಳಬೇಕು. ಕೇತಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಕಾರಳ್ಳಿ ಗ್ರಾಮದಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಲಲಿತಮ್ಮ, ಎಂ.ವಿ.ರಾಧಾಮಣಿ,. ಸರಸ್ವತಮ್ಮ, ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯದರ್ಶಿ ಎಂ.ಎನ್.ರವೀಂದ್ರ, ಮುಖಂಡರಾದ ಎ.ಹರೀಶ್, ನಾರಾಯಣಸ್ವಾಮಿ, ಚಿನ್ನಪ್ಪ, ಮನು ಕುಮಾರ್, ಲಕ್ಷ್ಮಿದೇವಿ, ಡಿವೈಎಫ್‌ಐನ ಜಿಲ್ಲಾ ಕಾರ್ಯದರ್ಶಿ ವಾಸುರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.
ತಲಗುಂದ, ಪುರಹಳ್ಳಿ, ಬುಸನಹಳ್ಳಿ, ಉರಿಗಿಲಿ ಗೋಮಾಳದಲ್ಲಿ ಜಲ್ಲಿ ಕ್ರಷರ್: ರೈತರ ವಿರೋಧ
ಕೋಲಾರ: ತಾಲೂಕಿನ ಸುಗಟೂರು ಹೋಬಳಿಯ ತಲಗುಂದ, ಪುರಹಳ್ಳಿ, ಬುಸನಹಳ್ಳಿ, ಉರಿಗಿಲಿ ಗ್ರಾಮಗಳ ಗೋಮಾಳಗಳಲ್ಲಿ ಜಲ್ಲಿ ಕ್ರಷರ್ ಸ್ಥಾಪನೆ ಮಾಡಲು ಅನುಮತಿ ನೀಡಿರುವ ಸರ್ಕಾರದ ಕ್ರಮವನ್ನು  ರೈತರು ವಿರೋಧಿಸಿದ್ದಾರೆ.
ಬುಸನಹಳ್ಳಿ ಗ್ರಾಮದ ಸರ್ವೇ ನಂ.1 ರಲ್ಲಿ ಭೂತಾಯಮ್ಮ ಹಾಗೂ ಚೌಡೇಶ್ವರಮ್ಮ ದೇವಾಲಯಗಳಿದ್ದು ಯುಗಾದಿಯ ಮುನ್ನಾ ದಿನ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ.
ಕೃಷಿ ಜಮೀನು: ಉರಿಗಿಲಿ ಗ್ರಾಮದ ಸರ್ವೇ ನಂ 54, ಬುಸನಹಳ್ಳಿ ಗ್ರಾಮದ ಸರ್ವೇ ನಂ 1 ರಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ಬೆಳೆಸಿ ಈಗ ದೊಡ್ಡ ಮರಗಳಾಗಿವೆ, ಈ ಪ್ರದೇಶಕ್ಕೆ ಹೊಂದಿಕೊಂಡಂತೆ ಉರಿಗಿಲಿ ಗ್ರಾಮದ ರೈತರು 120 ಎಕರೆ, ಹಾಗೂ ಬುಸನಹಳ್ಳಿ ಗ್ರಾಮದ 70 ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಸೊಪ್ಪ ಬೆಳೆದು ನೂರಾರು ಜನ ಕೃಷಿಯಿಂದ ಜೀವನ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಜಲ್ಲಿ ಕ್ರಷರ್‌ಗಳು ತಲೆ ಎತ್ತಿದರೆ ಬೋರ್‌ವಲ್‌ಗಳಲ್ಲಿ ನೀರು ಕಲುಷಿತವಾಗುತ್ತದೆ. ಹಿಪ್ಪುನೇರಳೆ ಸೊಪ್ಪು ಧೂಳಿನಿಂದ ಹಾಳಾಗುತ್ತದೆ. ಜಿಲ್ಲಾಡಳಿತ ಹಾಗೂ ಸರ್ಕಾರಗಳು ಬಂಡವಾಳ ಶಾಹಿಗಳ ಪರವಾಗಿ ನಿಂತು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಜಲ್ಲಿ ಕ್ರಷರ್‌ಗಳಿಗೆ ಅನುಮತಿ ನೀಡಿರುವುದು ಖಂಡನೀಯ ಎಂದು ರೈತರು ಆರೋಪಿಸಿದ್ದಾರೆ.
ದಲಿತ ಸಂಘಟನೆಗಳ ಸಮನ್ವಯ ಸಮಿತಿ ರಚನೆ
ಚಿಕ್ಕಬಳ್ಳಾಪುರ: ದಲಿತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದ ಮುಖಂಡರ ನೇತೃತ್ವದಲ್ಲಿ 16ಕ್ಕೂ ಹೆಚ್ಚು ವಿವಿಧ ದಲಿತ ಸಂಘಟನೆಗಳು ಸೇರಿ ನೂತನವಾಗಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ರಚಿಸಿಕೊಂಡಿವೆ.
ಕೆಲವು ದಲಿತ ಸಂಘಟನೆಗಳು ಮುಖಂಡರ ನೇತೃತ್ವದಲ್ಲಿ ವಿವಿಧ ಬಣಗಳಾಗಿ ವಿಭಜನೆಯಾಗಿವೆ. ತಮ್ಮದೇ ಆದ ರೀತಿಯಲ್ಲಿ ದಲಿತರ ಪರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರತ್ಯೇಕ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಅನೇಕ ಸಂದರ್ಭದಲ್ಲಿ ಒಂದು ಸಂಘಟನೆ ಒಂದು ನಿಲುವನ್ನು ವಿರೋಧಿಸಿದರೆ, ಮತ್ತೊಂದು ಬೆಂಬಲಿಸುವುದು ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಅಧಿಕಾರಿಗಳು ಸಂಘಟನೆ ಮುಖಂಡರನ್ನು ಪರಸ್ಪರ ಎತ್ತಿ ಕಟ್ಟಿ ಹೋರಾಟದ ದಿಕ್ಕನ್ನು ತಪ್ಪಿಸುತ್ತಿವೆ ಎಂದು ದಲಿತ ಮುಖಂಡರೇ ಆರೋಪಿಸುತ್ತಿದ್ದು, ಪ್ರತ್ಯೇಕವಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಸಮರ್ಪಕವಾಗಿ ಪ್ರತಿಕ್ರಿಯೆ ದೊರೆಯದ ಕಾರಣ ಸಮನ್ವಯ ಸಮಿತಿಯನ್ನು ರಚಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಮನ್ವಯ ಸಮಿತಿ ಅಧ್ಯಕ್ಷ ಕೆ.ಸಿ. ರಾಜಾಕಾಂತ್, ಪ್ರಧಾನ ಕಾರ್ಯದರ್ಶಿ ಸು.ಧಾ. ವೆಂಕಟೇಶ್, ಉಪಾಧ್ಯಕ್ಷರಾಗಿ ಗವಿರಾಯಪ್ಪ, ನಾರಾಯಣ್ ಜೀ, ಜಿ. ನಾರಾಯಣಸ್ವಾಮಿ, ಕಾರ್ಯದರ್ಶಿ ಗವಿಗಾನಹಳ್ಳಿ ಮುನಿಯಪ್ಪ, ಸಹಕಾರ್ಯದರ್ಶಿಗಳಾಗಿ ಮಂಜುನಾಥ್, ವಿಜಯ್ ಕುಮಾರ್, ನಾರಾಯಣಸ್ವಾಮಿ, ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.
ಸೌಲಭ್ಯ ಪ್ರತಿ ರೈತನಿಗೂ ಸಿಗಬೇಕು: ನಾಗರಾಜ್
ಗುಡಿಬಂಡೆ: ಸರ್ಕಾರ ಬಡರೈತರಿಗಾಗಿ ಅನೇಕ ಸೌಲಭ್ಯ ಜಾರಿಗೊಳಿಸುತ್ತಿದ್ದು, ಇವು ಪ್ರತಿ ರೈತನಿಗೂ ಸಿಗುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕೆಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಿ.ಎಸ್. ನಾಗರಾಜ್ ಅಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದ ಕೃಷಿ ಇಲಾಖಾ ಕಚೇರಿಯಲ್ಲಿ ನಡೆದ ಕೃಷಿಕ ಸಮಾಜದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿರುವ ಈ ತಾಲೂಕಿನಲ್ಲಿ ಮಳೆ ಕೊರತೆಯಿಂದ ರೈತರು ಬಡತನದಿಂದ ಬಳಲುತ್ತಿದ್ದು, ಸಾಲಬಾಧೆಯಿಂದ ತತ್ತರಿಸಿ ಹೋಗಿದ್ದಾರೆ. ಕೃಷಿ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತ ಮಾಹಿತಿ ಕೊರತೆಯಿಂದಾಗಿ ಅವುಗಳನ್ನು ಪಡೆಯಲು ರೈತ ವಿಫಲನಾಗುತ್ತಿದ್ದಾನೆ. ಇಂದು ಇವು ಕೆಲವರ ಪಾಲಾಗುತ್ತಿವೆಯೇ ವಿನಃ ನಿಜವಾದ ರೈತನಿಗೆ ಸೇರುತ್ತಿಲ್ಲ. ಆದ ಕಾರಣ ಕಾಲಕಾಲಕ್ಕೆ ಸೌಲಭ್ಯಗಳ ಬಗ್ಗೆ ರೈತರಿಗೆ ತಲುಪಿಸುವಂತಹ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ಸಲಹೆ ನೀಡಿದರು.
ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ಈ ಹಿಂದೆ ಜಾರಿಯಲ್ಲಿದ್ದ ಬೆಳೆ ವಿಮಾ ಯೋಜನೆಯಲ್ಲಿ ಕೆಲವೊಂದು ಲೋಪದೋಷಗಳನ್ನು ಸರಿಪಡಿಸಿ, ಮಾರ್ಪಾಡಿತ ಬೆಳೆ ವಿಮಾ ಯೋಜನೆ ಜಾರಿ ಮಾಡಲಾಗಿದೆ. ರೈತರು ಈ ವಿಮೆಯನ್ನು ಜೂ. 30ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು. ಸಭೆಯಲ್ಲಿ ರೇಷ್ಮೆ ಇಲಾಖೆ, ತೋಟಗಾರಿಕೆ ಹಾಗೂ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ತಮ್ಮ ಇಲಾಖೆಗಳಲ್ಲಿ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಕೃಷಿ ಅಧಿಕಾರಿ ಶಂಕರಯ್ಯ, ತಾಲೂಕು ಕೃಷಿಕ ಸಮಾಜದ ಕಾರ್ಯದರ್ಶಿ ಜಿ. ರಾಜಗೋಪಾಲ್ ಇದ್ದರು.
ಅಕ್ರಮ ಆರೋಪ: ಕೂಡಾ ಕಚೇರಿ ಕಡತ ಪರಿಶೀಲನೆ
ಕೋಲಾರ: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯದ ಅಧಿಕಾರಿಗಳ ತಂಡವು ಬುಧವಾರ ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿವೆ. ನಗರಾಭಿವೃದ್ಧಿ ಪ್ರಾಧಿಕಾರವೇ ಅಭಿವೃದ್ಧಿ ಮಾಡಿದ್ದ ಬಡಾವಣೆಯ ಮೂಲ ಕಡತಗಳು ಮತ್ತು ನಕಾಶೆಗಳು ಮಾಯವಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಿ.ಕೆ. ರವಿ ನಗರ ಮತ್ತು ಗ್ರಾಮೀಣ ಯೋಜನಾ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸಿದ್ದರು. ಇದರ ಬಗ್ಗೆ ತನಿಖೆ ಮಾಡುವುದಕ್ಕಾಗಿ ಕಚೇರಿಗೆ ಭೇಟಿ ನೀಡಿದ್ದ ನಗರ ಮತ್ತು ಗ್ರಾಮೀಣ ಯೋಜನಾ ನಿರ್ದೇಶನಾಲಯದ ಅಧಿಕಾರಿಗಳ ತಂಡವು ಕಡತಗಳನ್ನು ಪರಿಶೀಲನೆ ನಡೆಸಿತು. ಇಲಾಖೆಯ ಜಂಟಿ ನಿರ್ದೇಶಕ ಮುರಳಿ ನೇತೃತ್ವದ ಮೂವರು ಅಧಿಕಾರಿಗಳ ತಂಡವು ಪ್ರಮುಖವಾದ ಕಡತಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿವೆ. ನಂತರ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರನ್ನು ಭೇಟಿ ಮಾಡಿದ ಅಧಿಕಾರಿಗಳ ತಂಡವು ಕಾರ್ಯಾಚರಣೆ ಬಗ್ಗೆ ವಿವರಿಸಿದೆ.
ಹುದ್ದೆಗಳ ಕಡಿತಕ್ಕೆ ವಿರೋಧ
ಕೋಲಾರ: ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಯ ಪುನರ್ ರಚನೆಗಾಗಿ ಸರ್ಕಾರ ಈ ಎರಡೂ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಕಡಿತಗೊಳಿಸಲು ನಿರ್ಧರಿಸಿರುವುದನ್ನು ವಿರೋಧಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್ ನೇತೃತ್ವದಲ್ಲಿ ಮಂಗಳವಾರ ಕೃಷಿ ಇಲಾಖೆ ಆವರಣದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ಎರಡು ಇಲಾಖೆಯ ಅದಿಕಾರಿಗಳು ಮತ್ತು ನೌಕರರು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜು ಅವರಿಗೆ ಮನವಿ ಸಲ್ಲಿಸಿದರು. ಕೃಷಿ ಮತ್ತು ಜಲಾನಯನ ಇಲಾಖೆಯನ್ನು ಪುನರ್ ರಚನೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಹಾಲಿ ಇರುವ ಹುದ್ದೆಗಳನ್ನು ಕಡಿತಗೊಳಿಸಬಾರೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಿಕ್ಕಣ್ಣ ಮನವಿ ಮಾಡಿದರು. ರಾಜ್ಯದ ಪ್ರತಿ ಹೋಬಳಿಯಲ್ಲೂ ರೈತ ಸಂಪರ್ಕ ಕೇಂದ್ರವಿದೆ, ಕೃಷಿ, ಜಲಾನಯನ ಯೋಜನೆಗಳನ್ನು ರೈತ ವರ್ಗಕ್ಕೆ ತಲುಪಿಸಬೇಕಾದಲ್ಲಿ ಈಗಿರುವ ಸಿಬ್ಬಂದಿಗಿಂತ ಹೆಚ್ಚಿನ ಹುದ್ದೆ ಮಂಜೂರಾತಿ ನೀಡಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅನುವು ಮಾಡಿಕೊಡಬೇಕಾಗಿದೆ ಎಂದರು. ಹುದ್ದೆಗಳನ್ನು ಸರ್ಕಾರ ಕಡಿತಗೊಳಿಸಿದ್ದೇ ಆದಲ್ಲಿ  ಹಾಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ತಮ್ಮ ಸೇವಾವಧಿಯಲ್ಲಿ ಯಾವುದೇ ಬಡ್ತಿ ಇಲ್ಲದೇ ವಂಚಿತರಾಗುತ್ತಾರೆ ಎಂದು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement